ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಎ.ಜಿ.ಪೆರಾರಿವಾಳನ್ ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಬುಧವಾರ (ಮೇ 18) ಆದೇಶ ನೀಡಿದೆ.
ಇದನ್ನೂ ಓದಿ:ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಏಳು ಅಪರಾಧಿಗಳಲ್ಲಿ ಪೆರಾರಿವಾಳನ್ ಕೂಡಾ ಸೇರಿದ್ದು, 2018ರಲ್ಲಿ ತಮಿಳುನಾಡು ಸರ್ಕಾರ ಪೆರಾರಿವಾಳನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೆರಾರಿವಾಳನ್ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು.
ಸುಪ್ರೀಂಕೋರ್ಟ್ ನ ಜಸ್ಟೀಸ್ ಎಲ್.ನಾಗೇಶ್ವರ ರಾವ್ ಮತ್ತು ಜಸ್ಟೀಸ್ ಬಿಆರ್ ಗವಾಯಿ ಅವರನ್ನೊಳಗೊಂಡ ಪೀಠ, ಪೆರಾರಿವಾಳನ್, ತಮಿಳುನಾಡು ಹಾಗೂ ರಾಜ್ಯಪಾಲರ ಪರ ವಕೀಲರ ವಾರದ, ಪ್ರತಿವಾದ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತ್ತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಾಳನ್ 31 ವರ್ಷ ಜೈಲುಶಿಕ್ಷೆ ಅನುಭವಿಸಿದ್ದು, ತನಗೆ ಅವಧಿಪೂರ್ವ ಬಿಡುಗಡೆಗೆ ಅವಕಾಶ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರದ ಶಿಫಾರಸ್ಸಿನ ಮೇರೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದಾಗಿ ವರದಿ ವಿವರಿಸಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರಾರಿವಾಳನ್ ಕ್ಷಮಾದಾನದ ಅರ್ಜಿಯ ಕುರಿತು ರಾಷ್ಟ್ರಪತಿ ಅವರ ನಿರ್ಧಾರ ಹೊರಬೀಳುವವರೆಗೆ ನ್ಯಾಯಾಲಯ ಕಾಯಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ಸುಪ್ರೀಂಕೋರ್ಟ್ ಪೀಠ ಒಪ್ಪಿರಲಿಲ್ಲ ಎಂದು ಎಎನ್ ಐ ವರದಿ ಮಾಡಿದೆ.