Advertisement

Belagavi: ಪೃಥ್ವಿ ಸಿಂಗ್‌ ಪ್ರಕರಣ-ಹೆಬ್ಟಾಳ್ಕರ್‌,ಪರಮೇಶ್ವರ್‌ ರಾಜೀನಾಮೆಗೆ ರಾಜೀವ್‌ ಆಗ್ರಹ

12:11 AM Dec 09, 2023 | Team Udayavani |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಟಾಳ್ಕರ್‌ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಪೊಲೀಸ್‌ ಇಲಾಖೆಯಿಂದ ನ್ಯಾಯಾ ಲಯಕ್ಕೆ ವಂಚನೆ ಮಾಡಿದ್ದಾರೆ. ಪೊಲೀಸ್‌ ಇಲಾಖೆಯನ್ನು ನಿಯಂತ್ರಿಸುವಲ್ಲಿ ವಿಫ‌ಲರಾಗಿರುವ ಗೃಹ ಸಚಿವ ಡಾ| ಪರಮೇಶ್ವರ್‌ ಹಾಗೂ ಲಕ್ಷ್ಮಿ ಹೆಬ್ಟಾಳ್ಕರ್‌ ತತ್‌ಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಪಿ.ರಾಜೀವ್‌ ಆಗ್ರಹಿಸಿದ್ದಾರೆ.

Advertisement

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೃಥ್ವಿ ಸಿಂಗ್‌ ಆರು ಪುಟಗಳ ದೂರನ್ನು ಪೊಲೀಸರಿಗೆ ನೀಡಿದ್ದಾರೆ. ಆದರೆ ಪೊಲೀಸರು ಈ ಆರು ಪುಟಗಳ ದೂರಿನ ಬದಲಾಗಿ ಕೇವಲ ಎರಡು ಪುಟಗಳ ನಕಲಿ ದೂರನ್ನು ಮಾತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದು ಸಣ್ಣ ಅಪರಾಧವಲ್ಲ; ಸಂವಿಧಾನದ ಉಲ್ಲಂಘನೆ, ಮೂಲಭೂತ ಹಕ್ಕುಗಳ ಉಲ್ಲಂಘನೆ. ಸರಕಾರವೇ ಇದರಲ್ಲಿ ಶಾಮೀಲಾಗಿದೆ ಎಂದರು.

ಬೆಳಗಾವಿಯಲ್ಲಿ ಪೃಥ್ವಿ ಸಿಂಗ್‌ ಅವರ ಮೇಲೆ ಲಕ್ಷ್ಮಿ ಹೆಬ್ಟಾಳ್ಕರ್‌ ಅವರ ಸಹೋದರ ಬೆಂಬಲಿಗರ ಜತೆ ಸೇರಿ ಹಲ್ಲೆ ಮಾಡಿ ಅವರ ಕೈಯಿಂದ ಮೊಬೈಲ್‌ ಕಿತ್ತುಕೊಂಡಿದ್ದರು. ಬಳಿಕ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗ ಪೃಥ್ವಿ ಸಿಂಗ್‌ ಅವರು ಆರು ಪುಟಗಳ ದೂರು ದಾಖಲಿಸಿದ್ದರು. ಪೊಲೀಸರಲ್ಲಿ ಕೇಳಿದಾಗ ಎಫ್ಐಆರ್‌ನ ಮೂಲ ಪ್ರತಿಯನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಪೃಥ್ವಿ ಸಿಂಗ್‌ ನ್ಯಾಯಾಲಯದಿಂದ ಟ್ರೂ ಕಾಪಿ ಪಡೆದಿದ್ದಾರೆ. ಆಗ ಆರು ಪುಟಗಳ ದೂರಿನ ಬದಲಾಗಿ ಪೊಲೀಸರು ನಕಲಿ ದೂರಿನ ಕಾಪಿ ಸೃಷ್ಟಿಸಿ, ಎರಡು ಪುಟಗಳ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಸ್ಪಷ್ಟಗೊಂಡಿದೆ ಎಂದು ತಿಳಿಸಿದರು.

ಕಾಪಿ ಪೇಸ್ಟ್‌ ಮೂಲಕ ಎಡಿಟ್‌ ಮಾಡಿ ಬೇಕಾದ ಕೆಲವೇ ವಾಕ್ಯಗಳನ್ನು ಬಳಸಿಕೊಂಡು ಪೊಲೀಸರೇ ನಕಲಿ ದೂರು ಸೃಷ್ಟಿಸಿದಂತಿದೆ. ಇದು ಸರಕಾರವೇ ನ್ಯಾಯಾಲಯಕ್ಕೆ ವಂಚಿಸಿದ ಪ್ರಕರಣ. ದೂರಿನ ಮರುಸೃಷ್ಟಿ ಸರಕಾರ ಪ್ರಾಯೋಜಿತ ದೌರ್ಜನ್ಯ ಎಂದು ರಾಜೀವ್‌ ಗಂಭೀರ ಆರೋಪ ಮಾಡಿದ್ದಾರೆ.

ಹೈಕೋರ್ಟ್‌ ಪ್ರಕರಣ ದಾಖಲಿಸಿಕೊಳ್ಳಲಿ
ಒಬ್ಬ ಬಲಿಪಶು, ಫಿರ್ಯಾದುದಾರನ ದೂರು ಯಥಾವತ್ತಾಗಿ ನ್ಯಾಯಾಲಯಕ್ಕೆ ಹೋಗಬೇಕು. ಅದು ಹೋಗದಿದ್ದರೆ ಪೊಲೀಸರಿಂದ ಆತನ ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಂತೆ. ಇಲ್ಲಿ ಸರ್ಕಾರವೇ ನಕಲಿ ದಾಖಲೆಯನ್ನು ಸತ್ಯವಾದ ದಾಖಲೆ ಎಂದು ತೋರಿಸುವ ಪ್ರಯತ್ನ ನಡೆದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

ಲಕ್ಷ್ಮಿ ಹೆಬ್ಟಾಳ್ಕರ್‌ ದೂರನ್ನು ಮರುಸೃಷ್ಟಿಸಲು ತಮ್ಮ ಸಚಿವ ಸ್ಥಾನ ಮತ್ತು ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿದ್ದಾರೆ. ಭಾರತದ ಇತಿಹಾಸದಲ್ಲೇ ಎಫ್ಐಆರ್‌ ಮರುಸೃಷ್ಟಿ ಮಾಡಿದ ಪ್ರಕರಣವನ್ನು ನಾನು ಇಲ್ಲಿಯವರೆಗೆ ಕೇಳಿಲ್ಲ ಎಂದು ಮಾಜಿ ಪೊಲೀಸ್‌ ಅಧಿಕಾರಿಯಾಗಿರುವ ರಾಜೀವ್‌ ಹೇಳಿದ್ದಾರೆ.

ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವುದು ನೈಜ ಎಫ್ಐಆರ್‌ ಎಂದು ಸರ್ಕಾರ ಸಾಬೀತುಪಡಿಸಿದರೆ ನಾನು ಮಂಡಿಯೂರಿ ರಾಜ್ಯದ ಜನರ ಕ್ಷಮೆ ಕೇಳುವೆ . ಒಂದು ವೇಳೆ ಇದು ನಕಲಿ ಎಂದು ಸಾಬೀತಾದರೆ ತಕ್ಷಣಕ್ಕೆ ಎರಡೂ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿಯವರನ್ನು ರಾಜೀವ್‌ ಆಗ್ರಹಿಸಿದರು.

ಪೃಥ್ವಿ ಸಿಂಗ್‌ ಅವರು ನನ್ನ ಕಡೆಯಿಂದ ಲಕ್ಷ್ಮಿ ಹೆಬ್ಟಾಳ್ಕರ್‌ ಅವರು 10 ಲಕ್ಷವನ್ನು ಕಿತ್ತುಕೊಂಡಿದ್ಧಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಲಕ್ಷ್ಮಿ ಹೆಬ್ಟಾಳ್ಕರ್‌ ಶಾಸಕರಾಗಿದ್ದು ಜನಪ್ರತಿನಿಧಿಯಾಗಿ ಭ್ರಷ್ಟಾಚಾರ ಮಾಡಿದ ಪ್ರಕರಣ ವಾಗಲಿದೆ. ಇದನ್ನು ತಪ್ಪಿಸಲು ದೂರನ್ನು ಮರುಸೃಷ್ಟಿ ಮಾಡಿರಬಹುದು. ಹಾಗೆಯೇ ಬಲ ಪ್ರಯೋಗಿಸಿ ನನ್ನ ಕೈಯಿಂದ ಚನ್ನರಾಜ್‌ ಹಟ್ಟಿಹೊಳಿ ಮೊಬೈಲ್‌ ಕಿತ್ತುಕೊಂಡರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ದರೋಡೆ ಪ್ರಕರಣವಾಗುತ್ತದೆ. ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ಧಾಗಿ ತಿಳಿಸಿದ್ಧಾರೆ. ಇವೆಲ್ಲವನ್ನು ಮುಚ್ಚಿ ಹಾಕಲು ಪೊಲೀಸರೇ ಸುಳ್ಳು ದೂರು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ಧಾರೆ ಎಂದು ರಾಜೀವ್‌ ವಿವರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next