“ಕಾಲಾ’ ಸಿನಿಮಾ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ “ಪೆಟ್ಟ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. “ಕಾಲಾ’ದಲ್ಲಿ ಕರಿಕಪ್ಪು ಸ್ಟೈಲ್ನಲ್ಲಿ ಮಿಂಚಿದ್ದ ರಜನಿ ಇಲ್ಲಿ ಸಖತ್ ಕಲರ್ಫುಲ್ ಆಗಿ ಕಾಣಿಸಿಕೊಂಡಿದ್ದು, ಕಾರ್ತಿಕ್ ಸುಬ್ಬರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ರಜನಿ ಜೊತೆ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಕೂಡ ಇದೇ ಮೊದಲ ಬಾರಿ ನಟಿಸಲಿದ್ದಾರೆ.
ಕಲರ್ಫುಲ್ ಟೀಸರ್ನಲ್ಲಿ ಪುರಾಣ ಬಂಗಲೆಯೊಂದರ ಒಳಗೆ ರಜನಿ ಎಂಟ್ರಿ ಕೊಡುವ ದೃಶ್ಯ ತೋರಿಸಲಾಗಿದ್ದು, ಅದರೊಂದಿಗೆ ಮೇಣದ ಬತ್ತಿ, ಕತ್ತಿ, ಕಾಗದಗಳು ಗಾಳಿಯಲ್ಲಿ ಹಾರಾಡುವುದನ್ನು ತೋರಿಸಲಾಗಿದೆ. ಅಲ್ಲದೇ ಫಸ್ಟ್ ಲುಕ್ ಟೀಸರ್ ರಜನಿ ಅಭಿನಯದ “ಚಂದ್ರಮುಖಿ’ಯ ನಾಗವಲ್ಲಿಯನ್ನು ಮತ್ತೊಮ್ಮೆ ನೆನಪಿಸುವಂತಿದೆ. ಈ ಸಿನಿಮಾದ ಕಥೆಯು ಹಾರರ್ ಸುತ್ತ ಸುತ್ತಲಿದೆಯಾ ಎಂಬ ಸಂಶಯ ಕೂಡಾ ರಜನಿಯ ಎಂಟ್ರಿಯಿಂದ ಮೂಡುತ್ತದೆ.
ಸೈಲೆಂಟ್ ಸಿನಿಮಾ “ಮರ್ಕ್ಯೂರಿ’ ಬಳಿಕ ಕಾರ್ತಿಕ್ ಸುಬ್ಬರಾಜ್ ಕೈಗೆತ್ತಿಕೊಂಡಿರುವ “ಪೆಟ್ಟ’ದಲ್ಲಿ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳಲಿದೆ. ಸಿಮ್ರಾನ್ ಮತ್ತು ತ್ರಿಷಾ ನಾಯಕಿಯರಾಗಿ ಮಿಂಚಲಿದ್ದಾರೆ. ಹಾಗೂ ಕಾಲಿವುಡ್ನ ಯುವ ತಾರೆಯರಾದ ಬೋಬಿ ಸಿಂಹ, ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ಗೆ ಸಾಥ್ ನೀಡಲಿದ್ದಾರೆ. ಹಾಗೆಯೇ “ಪೆಟ್ಟ’ ಚಿತ್ರದ ಮೂಲಕ ಬಾಲಿವುಡ್ ಸೆನ್ಸೇಷನಲ್ ನಟ ನವಾಜುದ್ದೀನ್ ಸಿದ್ದಿಕಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆಗೈಯಲಿದ್ದಾರೆ.
“ಪಿಜ್ಜಾ’, “ಜಿಗರ್ಥಂಡ’, “ಇರೈವಿ’ ಮತ್ತು “ಮರ್ಕ್ಯೂರಿ’ ಎಂಬ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವುದು ಕೊಲೆವೆರಿ ಖ್ಯಾತಿಯ ಅನಿರುದ್ಧ್ ರವಿಚಂದರ್. “ಎಂದಿರನ್’ ಸಿನಿಮಾ ನಂತರ ಕಲಾನಿಧಿ ಮಾರನ್ ಮಾಲೀಕತ್ವದ ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಇನ್ನು ರಜನಿ ಅಭಿನಯದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ “2.0′ (ರೋಬೊ2) ಚಿತ್ರವು ನವೆಂಬರ್ 29ರಂದು ತೆರೆಗೆ ಬರಲು ಸಜ್ಜಾಗಿದೆ.