ನವದೆಹಲಿ: ಪಂಚಭಾಷಾ ನಟ ರಜನಿಕಾಂತ್ ಅವರು ಶನಿವಾರ(ಡಿಸೆಂಬರ್ 12, 2020) 70ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ನಟ, ನಟಿಯರು, ಗಣ್ಯರು ಶುಭ ಕೋರಿದ್ದಾರೆ.
ಡಿಸೆಂಬರ್ 31ರಂದು ಹೊಸ ರಾಜಕೀಯ ಪಕ್ಷದ ಸ್ಥಾಪನೆಯ ಘೋಷಣೆಗೂ ಒಂದು ವಾರದ ಮೊದಲು 70ರ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿರುವ ರಜನಿಕಾಂತ್ ಕೇವಲ ಸೂಪರ್ ಸ್ಟಾರ್ ಮಾತ್ರವಲ್ಲ, ತಮಿಳುನಾಡು ಮತ್ತು ಭಾರತದ ರಾಷ್ಟ್ರರಾಜಕಾರಣದ ಮುಖ್ಯ ವ್ಯಕ್ತಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಹಿರಿಯ ನಟ ರಜನಿಕಾಂತ್ ಕಳೆದ ವಾರ ಅಧಿಕೃತವಾಗಿ ಜನವರಿಯಲ್ಲಿ ತಮ್ಮ ಬಹುನಿರೀಕ್ಷೆಯ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. 2021ರಲ್ಲಿ ತಮಿಳುನಾಡಿನ ವಿಧಾನಸಭಗೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಜನಿ ರಾಜಕೀಯ ಪಕ್ಷ ಸ್ಥಾಪನೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:“ಕೈ” ಸೋಲಿಗೆ ಸೋನಿಯಾ, ಸಿಂಗ್ ಕಾರಣ…ಪ್ರಣಬ್ ಆತ್ಮಚರಿತ್ರೆಯಲ್ಲಿ ಮೋದಿ ಬಗ್ಗೆ ಹೇಳಿದ್ದೇನು?
ಇಂದು ಬೆಳಗ್ಗೆನಿಂದಲೇ ನೂರಾರು ಅಭಿಮಾನಿಗಳು, ಹಿತೈಷಿಗಳು ರಜನಿ ನಿವಾಸದ ಮುಂದೆ ಜಮಾಯಿಸಿದ್ದು, ರಜನಿಕಾಂತ್ ಫೋಟೋಗ್ರಾಫ್ಸ್ ಹೊಂದಿರುವ ಟಿ ಶರ್ಟ್ ಧರಿಸಿ ಸಂಭ್ರಮಿಸುತ್ತಿರುವುದಾಗಿ ವರದಿ ತಿಳಿಸಿದೆ.
ನಟ ರಜನಿ ಅಭಿಮಾನಿಗಳ ರಜನಿ ಮಕ್ಕಳ್ ಮಂಡ್ರಂ ಸಂಘಟನೆಯ ಸದಸ್ಯರು, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದರಲ್ಲಿ ಬಡವರಿಗೆ, ವಿದ್ಯಾರ್ಥಿಗಳಿಗೆ ದೇಣಿಗೆ ಸೇರಿದಂತೆ ರಕ್ತದಾನ ಶಿಬಿರಗಳು ನಡೆಯಲಿದೆ ಎಂದು ವರದಿ ಹೇಳಿದೆ.