Advertisement

ಗೇಮ್ ಚೇಂಜರ್! ಕೊನೆಗೂ ರಾಜಕೀಯ ಪ್ರವೇಶ…ಜನವರಿಯಲ್ಲಿ ರಜನಿಕಾಂತ್ ಪಕ್ಷ ಸ್ಥಾಪನೆ

01:16 PM Dec 03, 2020 | Nagendra Trasi |

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಕುರಿತ ಊಹಾಪೋಹಕ್ಕೆ ಗುರುವಾರ(ಡಿಸೆಂಬರ್ 03, 2020) ತೆರೆಬಿದ್ದಿದ್ದು, 2021ರ ಜನವರಿಯಲ್ಲಿ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದು, ಈ ಬಗ್ಗೆ ಡಿಸೆಂಬರ್ 31(2020)ರಂದು ಘೋಷಿಸುವುದಾಗಿ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.

Advertisement

ತಮಿಳುನಾಡು ರಾಜ್ಯರಾಜಕಾರಣಕ್ಕೆ ತಾನು ಪ್ರವೇಶಿಸುವುದಾಗಿ ರಜನಿಕಾಂತ್ ಅವರು 2017ರ ಡಿಸೆಂಬರ್ 31ರಂದು ಘೋಷಿಸಿದ್ದರು. ಆದರೆ ಹಲವಾರು ಕಾರಣಗಳಿಂದ ರಾಜಕೀಯ ಪಕ್ಷ ಸ್ಥಾಪನೆಯನ್ನು ಮುಂದೂಡತ್ತಲೇ ಬಂದಿದ್ದರು.

ಏತನ್ಮಧ್ಯೆ ಅನಾರೋಗ್ಯದ ಹಿನ್ನೆಲೆಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿಯೂ ರಜನಿಕಾಂತ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಅಧಿಕೃತವಾಗಿ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟಪಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಎಂದು ವರದಿ ತಿಳಿಸಿದೆ.

ಸೋಮವಾರ “ರಜನಿ ಮಕ್ಕಳ್ ಮಂಡ್ರಂ”ನ ಜಿಲ್ಲಾ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಿದ್ದ ರಜನಿಕಾಂತ್ ಅವರು, ತಾನು ರಾಜಕೀಯ ಪಕ್ಷ ಸ್ಥಾಪಿಸುತ್ತಿರುವ ಬಗ್ಗೆ ಡಿಸೆಂಬರ್ 31ರಂದು ಘೋಷಿಸುವುದಾಗಿ ತಿಳಿಸಿದ್ದರು.

Advertisement

“ರಾಜಕೀಯವೆಂಬುದು ಆಧ್ಯಾತ್ಮಿಕದ ಭಾಗ ಅದು ಜಾತಿ, ಭ್ರಷ್ಟಾಚಾರನ್ನು ಮೀರಿದ್ದು ಅಲ್ಲದೇ ರಾಜಕೀಯ ಕ್ಷೇತ್ರ ಜನರ ಏಳಿಗೆಗಾಗಿ ಇರುವ ಕಾರ್ಯಕ್ಷೇತ್ರವಾಗಿದೆ. ತಾನು ಯಾವ ಉದ್ದೇಶದಿಂದ ರಾಜಕೀಯ ಪ್ರವೇಶಿಸುತ್ತಿದ್ದೇನೆ ಎಂಬುದನ್ನು ತಮಿಳುನಾಡಿನ ಪ್ರತಿಯೊಂದು ಮೂಲೆ, ಮೂಲೆಗೂ ಸಂದೇಶವನ್ನು ತಲುಪಿಸುವಂತೆ ರಜನಿಕಾಂತ್ ತಮ್ಮ ಅಭಿಮಾನಿಗಳಲ್ಲಿ, ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿರುವುದಾಗಿ” ವರದಿ ವಿವರಿಸಿದೆ.

1996ರಲ್ಲಿ ರಜನಿಕಾಂತ್ ಅವರು ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡನ್ನು ಜಯಲಲಿತಾರಿಂದ ರಕ್ಷಿಸುವ ನಿಟ್ಟಿನಲ್ಲಿ ಡಿಎಂಕೆಯನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದರು. ಈ ಚುನಾವಣೆಯಲ್ಲಿ ಜಯಾ ನೇತೃತ್ವದ ಎಐಎಡಿಎಂಕೆ ಸೋತು ಅಧಿಕಾರ ಕಳೆದುಕೊಂಡಿತ್ತು. ಇದರಿಂದಾಗಿ ರಜನಿಕಾಂತ್ ತಮಿಳುನಾಡು ರಾಜಕೀಯದಲ್ಲಿ ಗೇಮ್ ಚೇಂಜರ್ ಎಂದೇ ಪರಿಗಣಿಸಲಾಗಿತ್ತು. ಅಲ್ಲದೇ ರಜನಿಕಾಂತ್ ಕೂಡಾ ರಾಜಕೀಯ ಪ್ರವೇಶಿಸಲು ಸುಗಮ ಹಾದಿ ಕಲ್ಪಿಸಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಯಲಲಿತಾ ಅವರ ನಿಧನದ ಒಂದು ವರ್ಷದ ಬಳಿಕ ರಾಜಕೀಯ ಪ್ರವೇಶಿಸುವ ಬಗ್ಗೆ ರಜನಿಕಾಂತ್ ಅಧಿಕೃತವಾಗಿ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next