ಚೆನ್ನೈ: ದಕ್ಷಿಣ ಭಾರತದ ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹದ ನಡುವೆಯೇ ಮಂಗಳವಾರ ಚೆನ್ನೈನಲ್ಲಿ ರಜನಿಕಾಂತ್ ತಮ್ಮ ಅಭಿಮಾನಿಗಳ ಜತೆ 2ನೇ ಸುತ್ತಿನ ಸಂವಾದ ನಡೆಸುತ್ತ, ಡಿಸೆಂಬರ್ 31ರಂದು ತಮ್ಮ ಅಂತಿಮ ನಿರ್ಧಾರವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ರಾಜಕೀಯ ಪ್ರವೇಶಿಸುವ ಕುರಿತಾಗಿ ತಮ್ಮ ಅಭಿಮಾನಿಗಳ ಜತೆ ಚರ್ಚಿಸಿ ಡಿ.31ರಂದು ಅಂತಿಮ ನಿರ್ಧಾರ ತಿಳಿಸುವುದಾಗಿ ಈಗಾಗಲೇ ಘೋಷಿಸಿರುವಂತೆ ಚೆನ್ನೈನಲ್ಲಿ ಅಭಿಮಾನಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ.
ಇಂದು ಚೆನ್ನೈನ ಕೋಡಂಬಾಕಂನಲ್ಲಿರುವ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಟ ರಜನಿಕಾಂತ್ ಅವರು ಅಭಿಮಾನಿಗಳ ಜೊತೆಗಿನ ಆರು ದಿನಗಳ ಕಾಲದ ಚರ್ಚೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಭಿಮಾನಿಗಳ ಜತೆಗಿನ ಚರ್ಚೆ ಡಿ.31ರವರೆಗೆ ಮುಂದುವರಿಯಲಿದೆ.
ನಾನು ರಾಜಕೀಯಕ್ಕೆ ಹೊಸಬನಲ್ಲ, ಆದರೂ ರಾಜಕೀಯ ಪ್ರವೇಶಕ್ಕೆ ಹಿಂಜರಿಯುದ್ದೇನೆ. 1996ರಿಂದಲೇ ರಾಜಕೀಯವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದೇನೆ. ರಾಜಕೀಯದ ಆಳ, ಅಗಲ ನನಗೆ ತಿಳಿದಿದೆ. ರಾಜಕೀಯಕ್ಕೆ ತೋಳ್ಬಲ ಇದ್ದರೆ ಸಾಲದು, ಬುದ್ಧಿಬಲವೂ ಬೇಕು ಎಂದು ಅಭಿಮಾನಿಗಳ ಜತೆ ಮಾತನಾಡುತ್ತ ರಜನಿಕಾಂತ್ ತಿಳಿಸಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ದೊಡ್ಡ, ದೊಡ್ಡ ನಾಯಕರಿದ್ದಾರೆ. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಹೀಗಾಗಿ ಯುದ್ಧಕ್ಕೆ ಇಳಿದ ಮೇಲೆ ಜಯಿಸಬೇಕು. ಒಂದು ವೇಳೆ ನಾನು ರಾಜಕೀಯಕ್ಕೆ ಬರಲೇಬೇಕು ಎಂದಿದ್ದರೆ ನಿಜಕ್ಕೂ ಬರುತ್ತೇನೆ. ಅದಕ್ಕಾಗಿ ಡಿ.31ರಂದು ತನ್ನ ನಿಲುವನ್ನು ಸ್ಪಷ್ಟಪಡಿಸುವುದಾಗಿ ರಜನಿ ಹೇಳಿದ್ದಾರೆ.