ಬಳ್ಳಾರಿ: ತೀವ್ರ ಕುತೂಹಲ ಮೂಡಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ -ಉಪಮೇಯರ್ ಆಯ್ಕೆಗೆ ಶನಿವಾರ ಚುನಾವಣೆ ನಡೆದಿದ್ದು, 34ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಸುಬ್ಬರಾಯುಡು, 37ನೇ ವಾರ್ಡ್ ಸದಸ್ಯೆ ಮಾಲನ್ ಬೀ ಮೇಯರ್-ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಹುಮತ ಹೊಂದಿದ್ದ ಕಾಂಗ್ರೆಸ್ ಕೊನೆಗೂ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಆಪರೇಷನ್ ಕಮಲ ಭೀತಿಯಿಂದಾಗಿ ಚುನಾವಣೆಗೂ ಮೂರು ದಿನಗಳ ಮುನ್ನ ಕಾಂಗ್ರೆಸ್ ಸದಸ್ಯರು ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಪಕ್ಷದ ವೀಕ್ಷಕರು, ಶಾಸಕರು, ಮುಖಂಡರು ಸತತ ಎರಡು ದಿನ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದರಾದರೂ, ಮೇಯರ್-ಉಪಮೇಯರ್ ಆಯ್ಕೆಗೆ ಒಮ್ಮತ ಮೂಡಿರಲಿಲ್ಲ. ಬೆಂಗಳೂರಿನಿಂದ ವಾಪಸ್ ಬಳ್ಳಾರಿಗೆ ಬಂದು ನಗರದ ಅಲ್ಲಂಭವನದಲ್ಲಿ ಪುನಃ ಸಭೆ ನಡೆಸಿದ ಮುಖಂಡರು, ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಅಂತಿಮವಾಗಿ ಮೇಯರ್ ಸ್ಥಾನಕ್ಕೆ ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಸ್ಥಾನಕ್ಕೆ ಮಾಲನ್‌ಬೀ ಅವರನ್ನು ಆಯ್ಕೆ ಮಾಡಿದ್ದಾರೆ. ಬಳಿಕ 10 ಗಂಟೆ ಸುಮಾರಿಗೆ ಅಭ್ಯರ್ಥಿಗಳಿಬ್ಬರೂ ನಾಮಪತ್ರ ಸಲ್ಲಿಸಿದರು.
ಈ ವೇಳೆ ಬಿಜೆಪಿಯಿಂದಲೂ ಮೇಯರ್ ಸ್ಥಾನಕ್ಕೆ 21ನೇ ವಾರ್ಡ್ ಸದಸ್ಯೆ ಸುರೇಖಾ ಮಲ್ಲನಗೌಡ, ಉಪಮೇಯರ್ ಸ್ಥಾನಕ್ಕೆ 25ನೇ ವಾರ್ಡ್ ಸದಸ್ಯ ಗೋವಿಂದರಾಜುಲು ನಾಮಪತ್ರ ಸಲ್ಲಿಸಿದ್ದರು. ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದ ಚುನಾವಣೆಯಲ್ಲಿ ಪಾಲಿಕೆಯ ಒಟ್ಟು 39 ವಾರ್ಡ್ ಸದಸ್ಯರು ಹಾಗೂ ಇಬ್ಬರು ಶಾಸಕರು, ಇಬ್ಬರು ಸಂಸದರು ಹಾಗೂ ಒಬ್ಬ ವಿಧಾನಪರಿಷತ್ ಸದಸ್ಯರು ಸೇರಿದಂತೆ 44 ಸದಸ್ಯ ಬಲದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಅಭ್ಯರ್ಥಿ ಎಂ.ರಾಜೇಶ್ವರಿ, ಉಪಮೇಯರ್ ಅಭ್ಯರ್ಥಿ ಮಾಲನ್ ಬೀ ಕ್ರಮವಾಗಿ ತಲಾ 29 ಮತಗಳನ್ನು ಪಡೆಯುವುದರ ಮೂಲಕ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಪ್ರಾದೇಶಿಕ ಆಯುಕ್ತ ಡಾ| ಎನ್.ವಿ. ಪ್ರಸಾದ್ ಘೋಷಿಸಿದರು.
ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಿಸ್ಪರ್ಧಿ ಸುರೇಖಾ ಮಲ್ಲನಗೌಡ, ಎಂ.ಗೋವಿಂದರಾಜುಲು ಅವರು ಕೇವಲ 15 ಮತಗಳನ್ನಷ್ಟೇ ಪಡೆದಿದ್ದಾರೆ. ಮೇಯರ್ ಮತ್ತು ಉಪಮೇಯರ್ ಕಣದಲ್ಲಿ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಎರಡು ನಿಮಿಷ ಕಾಲವಕಾಶ ನೀಡಲಾಗಿತ್ತಾದರೂ, ಯಾರೊಬ್ಬರು ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಯಿತು. ನಂತರ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹಲ್ಲೋಟ್ ಮತ್ತಿತರರು ಇದ್ದರು.
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಖುಷಿಯಾಗಿದೆ. ಮೇಯರ್ ಹುದ್ದೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೂ, ಒಲಿದು ಬಂದಿದ್ದು, ಸಮರ್ಥವಾಗಿ ನಿಭಾಯಿಸುವೆ. ಬಳ್ಳಾರಿ ನಗರದಲ್ಲಿ ಪ್ರಮುಖ ಸಮಸ್ಯೆಗಳಾದ ಕುಡಿಯುವ ನೀರು, ಸ್ವತ್ಛತೆ, ಚರಂಡಿ, ಬೀದಿ ದೀಪಗಳು ಸೇರಿ ಇನ್ನಿತರೆ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ
– ಎಂ.ರಾಜೇಶ್ವರಿ ಸುಬ್ಬರಾಯುಡು, ಮೇಯರ್, ಮಹಾನಗರ ಪಾಲಿಕೆ, ಬಳ್ಳಾರಿ