Advertisement

ಎಂಎಡಿಬಿ ಅಧ್ಯಕ್ಷರಾಗಿ ರಾಜೇಗೌಡ‌ ಅಧಿಕಾರ ಸ್ವೀಕಾರ

09:28 AM Jan 29, 2019 | |

ಶಿವಮೊಗ್ಗ: ಮಲೆನಾಡು ಅಭಿವೃದ್ಧಿ ಮಂಡಳಿ (ಎಂಎಡಿಬಿ) ಅಧ್ಯಕ್ಷರಾಗಿ ಶೃಂಗೇರಿ ಶಾಸಕ ಟಿ. ಡಿ ರಾಜೇಗೌಡ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

Advertisement

ನಂತರ ಮಾತನಾಡಿದ ಅವರು, ಮಲೆನಾಡು ಅಭಿವೃದ್ಧಿ ಮಂಡಳಿಯ ಸ್ಥಾಪನೆಯ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ. ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಮಂಡಳಿಗೆ 150 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಮಂಡಳಿಯ ವ್ಯಾಪ್ತಿಯ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಕ್ಷೇತ್ರ ವ್ಯಾಪ್ತಿಗೆ ಇದರಲ್ಲಿ ತಲಾ ಒಂದು ಕೋಟಿ ರೂ. ಒದಗಿಸಲಾಗುವುದು. ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.

ಮಲೆನಾಡು ಭಾಗದಲ್ಲಿ ಕಾಲು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕಾಲುಸಂಕಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು ಈಗಾಗಲೇ ನೂರು ಕೋಟಿ ರೂ. ಬಿಡುಗಡೆ ಮಾಡುವ ಘೋಷಣೆ ಮಾಡಿದ್ದು, ಚಿಕ್ಕಮಗಳೂರಿಗೆ ಈಗಾಗಲೇ 24 ಕೋಟಿ ರೂ. ಬಿಡುಗಡೆಯಾಗಿದೆ. ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಸೇತುವೆ ಮತ್ತು ಕಾಲುಸಂಕಗಳು ಬೇಗನೇ ಹಾಳಾಗುತ್ತವೆ. ಅಲ್ಲದೇ ಅತಿವೃಷ್ಟಿಯಿಂದಾಗಿ ಕಾಲುಸಂಕ ದಾಟಲು ಹೋಗಿ ಮರಣ ಹೊಂದಿದ ಕುಟುಂಬದವರಿಗೆ ಪರಿಹಾರ ನೀಡಲು ಒತ್ತು ನೀಡಲಾಗುವುದು ಎಂದು ಹೇಳಿದರು.

ಇದೇ ರೀತಿ ಶಾಲಾ ಕಾಲೇಜು ಕಟ್ಟಡ, ಅಂಗನವಾಡಿ, ರಸ್ತೆ, ಚೆಕ್‌ ಡ್ಯಾಂ, ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು. ಇದಕ್ಕಾಗಿ ಸರ್ಕಾರದಿಂದ ಮತ್ತಷ್ಟು ಅನುದಾನ ಕೇಳಲಾಗುವುದು. ಮಂಡಳಿಯ ವ್ಯಾಪ್ತಿಯಲ್ಲಿ ಈಗ ಇರುವ ಕೆಲವು ಅರೆ ಮಲೆನಾಡು ಪ್ರದೇಶಗಳನ್ನು ಮಂಡಳಿಯ ವ್ಯಾಪ್ತಿಯಿಂದ ಹೊರಗಿಡುವ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮಲೆನಾಡು ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಕೆಲಸ ಮಾಡಲು ಅನುಕೂಲವಾದಂತಾಗುತ್ತದೆ. ಆ ಭಾಗದಲ್ಲಿರುವ ಪ್ರದೇಶಗಳನ್ನು ಬಯಲು ಸೀಮೆ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸುವುದು ಒಳ್ಳೆಯದು ಎಂದರು.

Advertisement

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌, ಮಂಡಳಿಯ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಗಣಪತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕೆಎಫ್‌ಡಿ ನಿಯಂತ್ರಣಕ್ಕೆ ಕ್ರಮ
ಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಬಣ ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಮಂಡಳಿಯ ವತಿಯಿಂದ ಒದಗಿಸಲಾಗುವುದು. ಇದಕ್ಕಾಗಿ ಮತ್ತಷ್ಟು ಅನುದಾನ ತರಲಾಗುವುದು. ಒಟ್ಟಿನಲ್ಲಿ ಕಾಯಿಲೆ ಹತೋಟಿಗೆ ಎಲ್ಲ ರೀಠಿತಿಯ ಕಾರ್ಯಕ್ರಮಗಳನ್ನು ಮಂಗಳವಾರದಿಂದಲೇ ಆರಂಭಿಸಲಾಗುವುದು ಎಂದು ನೂತನ ಅಧ್ಯಕ್ಷರು ತಿಳಿಸಿದರು.

ಮಂಡಳಿ ಕಾರ್ಯ ವ್ಯಾಪ್ತಿ
ಎಂಎಡಿಬಿಯಲ್ಲಿ ಒಟ್ಟು 137 ಸದಸ್ಯರಿದ್ದಾರೆ. ಇದರಲ್ಲಿ ಈ ವ್ಯಾಪ್ತಿಯ 12 ಲೋಕಸಭಾ ಸದಸ್ಯರು, 65 ವಿಧಾನಸಭಾ ಸದಸ್ಯರು, 23 ವಿಧಾನ ಪರಿಷತ್‌ ಸದಸ್ಯರು, 13 ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಸರ್ಕಾರದಿಂದ ನೇಮಕಗೊಳ್ಳುವ 10 ಸದಸ್ಯರು, ಈ ವ್ಯಾಪ್ತಿಯ 10 ಜಿಲ್ಲಾಧಿಕಾರಿಗಳು ಹಾಗೂ ಮಂಡಳಿಯ ಕಾರ್ಯದರ್ಶಿ ಅವರು ಒಳಗೊಂಡಿದ್ದಾರೆ. ಮಂಡಳಿಗೆ 2018- 19 ನೇ ಸಾಲಿನಲ್ಲಿ ಸರಕಾರ 27 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಅನುದಾನ ಸೇರಿದಂತೆ ಪ್ರಸ್ತುತ 52 ಕೋಟಿ ರೂ. ಮಂಡಳಿಯಲ್ಲಿ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next