ಧರ್ಮಣ್ಣ ನಾಯಕನಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚೊಚ್ಚಲ ಸಿನಿಮಾ “ರಾಜಯೋಗ’ ಈಗ ಬಿಡುಗಡೆಗೆಯ ಹಂತಕ್ಕೆ ಬಂದಿದೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ರಾಜಯೋಗ’ ಸಿನಿಮಾ ಇದೇ ನವೆಂಬರ್ 17ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಮಧ್ಯಮಗಳ ಮುಂದೆ ಬಂದಿದ್ದ “ರಾಜಯೋಗ’ ಚಿತ್ರತಂಡ ಸಿನಿಮಾದ ಪ್ಯಾಥೋ ಹಾಡೊಂದನ್ನು ಬಿಡುಗಡೆ ಮಾಡಿತು.
ಅಕ್ಷಯ್ ಎಸ್. ರಿಶಭ್ ಸಂಗೀತ ಸಂಯೋಜನೆಯ ಈ ಗೀತೆಗೆ, ಪ್ರಮೋದ್ ಜೋಯಿಸ್ ಸಾಹಿತ್ಯವಿರುವ ಬಂಧು-ಬಳಗದ ಕುರಿತಾಗಿ ಈ ಹಾಡು ಮೂಡಿಬಂದಿದೆ. ಲಿಂಗರಾಜ ಉಚ್ಚಂಗಿ ದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ “ರಾಜಯೋಗ’ ಸಿನಿಮಾವನ್ನು “ಶ್ರೀರಾಮರತ್ನ ಪೊ›ಡಕ್ಷನ್ಸ್’ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕ ನಾಯ್ಕನ ಹಳ್ಳಿ, ಲಿಂಗರಾಜು ಕೆ. ಎನ್, ನೀರಜ್ ಗೌಡ ಮತು ಧರ್ಮಣ್ಣ ಕಡೂರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ಮಾಪಕರಲ್ಲಿ ಒಬ್ಬರಾದ ಕುಮಾರ ಕಂಠೀರವ, “ಈ ಹಾಡು ಸಂಬಂಧಗಳ ಬಗ್ಗೆ ತಿಳಿಸಿಕೊಡುತ್ತದೆ. ನಟ ಧರ್ಮಣ್ಣ ಈ ಸಿನಿಮಾದ ಕಂಟೆಂಟ್ ಬಗ್ಗೆ ಈ ತಂಡದಲ್ಲಿ ನಾನೂ ಒಬ್ಬನಾಗಿ ಸೇರಿದೆ. ಸಿನಿಮಾದಲ್ಲಿ ಗ್ರಾಮೀಣ ಸೊಗಡನ್ನು ತುಂಬಾ ಚೆನ್ನಾಗಿ ತರಲಾಗಿದೆ. ನಮ್ಮ ಸಿನಿಮಾವನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಪ್ರಾಮಾಣಿಕವಾಗಿ ಕೆಲಸ ಮಾಡಿ ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ. ಶ್ರದ್ದೆಯಿಂದ ಕೆಲಸ ಮಾಡಿದರೆ “ರಾಜಯೋಗ’ ಬಂದೇ ಬರುತ್ತೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಈ ಕಥೆ ನಡೆಯುತ್ತದೆ. ಕೆಎಎಸ್ ಎಕ್ಸಾಂ ಬರೆಯಲು ಹೊರಟ ನಾಯಕ, ಕೊನೆಗಾದರೂ ಕೆಎಎಸ್ ಬರೀತಾನಾ ಇಲ್ವಾ ಅನ್ನೋದೇ ಕಥೆಯ ಒಂದು ಎಳೆ. ಜೊತೆಗೆ ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನೂ ಇಲ್ಲಿ ಹೇಳಿದ್ದೇವೆ. ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಹೆಳಲಾಗಿದೆ’ ಎಂದು “ರಾಜಯೋಗ’ ಸಿನಿಮಾದ ಕಥಾಹಂದರ ತೆರೆದಿಟ್ಟರು ನಿರ್ದೇಶಕ ಲಿಂಗರಾಜ್.
ನಾಯಕ ನಟ ಧರ್ಮಣ್ಣ ಮಾತನಾಡುತ್ತ, “ತುಂಬಾ ಓದಿಕೊಂಡಿರುವವನ ಜೀವನ ಹೇಗಿರುತ್ತೆ ಅಂತ ಹೇಳುವ ಪಾತ್ರ ಈ ಸಿನಿಮಾದಲ್ಲಿದೆ. ಇದರಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಸೇರಿದೆ, ಪ್ರತಿಯೊಂದು ಪಾತ್ರಕ್ಕೂ ಸಮಾನ ಅವಕಾಶವಿದೆ. ಈಗಾಗಲೇ ಟ್ರೇಲರ್, ಸಾಂಗ್ಸ್ ಹಿಟ್ ಆಗಿದೆ, ಅದೇ ರೀತಿ ಜನ ಸಿನಿಮಾವನ್ನೂ ಗೆಲ್ಲಿಸುತ್ತಾರೆಂಬ ಭರವಸೆಯಿದೆ’ ಎಂದರು.