Advertisement

ಸದ್ಯಕ್ಕಿಲ್ಲ ‘ರಾಜವೀರ ಮದಕರಿ ನಾಯಕ’ಶೂಟಿಂಗ್  

07:41 PM Aug 06, 2021 | Team Udayavani |

ಬೆಂಗಳೂರು: ‘ರಾಬರ್ಟ್’  ಕಣ್ತುಂಬಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು  ‘ರಾಜವೀರ ಮದಕರಿ ನಾಯಕ’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಸಿನಿಮಾ ಸದ್ಯಕ್ಕೆ ಶೂಟಿಂಗ್ ನಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ.

Advertisement

ಹೌದು, ರಾಬರ್ಟ್ ಸಿನಿಮಾ ಬಳಿಕ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ಡಿ ಬಾಸ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸೆಟ್ಟೇರಿರುವ ಈ ಐತಿಹಾಸಿಕ ಕಥಾಹಂದರ ಚಿತ್ರ 20 ದಿನಗಳ ವರೆಗೆ ಕೇರಳದ ಕೊಚ್ಚಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಆದರೆ, ಅಷ್ಟರಲ್ಲಾಗಲೆ ಕೋವಿಡ್ ಸೋಂಕು ವಕ್ಕರಿಸಿಕೊಂಡಿದ್ದರಿಂದ ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ಕೊಡಲಾಯಿತು.

ಶೂಟಿಂಗ್ ಪುನಾರಂಭ ಯಾವಾಗ ?

ಎರಡನೇ ಅಲೆ ಭೀತಿ ಕಡಿಮೆಯಾಗಿ, ಲಾಕ್ ಡೌನ್ ಸಡಿಲಿಕೆಯಾಯಿತು ಎನ್ನುವಷ್ಟರಲ್ಲಿ ಮತ್ತು ಕೋವಿಡ್ ಮೂರನೇ ಅಲೆಯ ಕರಿಛಾಯೆ ಆವರಿಸುವ ಆತಂಕ ಶುರುವಾಗಿದೆ. ಇದು ರಾಜವೀರ ಮದಕರಿ ನಾಯಕ ಶೂಟಿಂಗ್ ಮೇಲೆ ಪರಿಣಾಮ ಬೀರುವುದು ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ಚಿತ್ರತಂಡ ಮಾಹಿತಿ ನೀಡಿದ್ದು, ಈಗಿನ ಪರಿಸ್ಥಿತಿಯಲ್ಲಿ ‘ರಾಜವೀರ ಮದಕರಿ ನಾಯಕ’ ಶೂಟಿಂಗ್ ಶೀಘ್ರದಲ್ಲಿ ಆರಂಭವಾಗುವುದು ಕಷ್ಟ’ ಎಂದಿದೆ.

ಇದೊಂದು ಐತಿಹಾಸಿಕ ಚಿತ್ರವಾಗಿರುವುದರಿಂದ ಪ್ರತಿದಿನ ಶೂಟಿಂಗ್ ಸೆಟ್‌ನಲ್ಲಿ 400-500 ಜನ ಕೆಲಸ ಮಾಡಬೇಕು. ರಾಜನ ಕಥೆ ಅಂದ್ರೆ ಅಲ್ಲಿ ನೂರಾರು ಸೈನಿಕರು ಇರಬೇಕು. ಇಷ್ಟ ದೊಡ್ಡ ಮಟ್ಟದಲ್ಲಿ ಪ್ರೊಡಕ್ಷನ್ ಇಟ್ಕೊಂಡು ಈ ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡುವುದು ಅಪಾಯದ ಕೆಲಸ ಎಂದು ತಾತ್ಕಾಲಿಕವಾಗಿ ಶೂಟಿಂಗ್ ಮುಂದೂಡಲಾಗಿದೆ.

Advertisement

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕೋವಿಡ್ ಪರಿಸ್ಥಿತಿ ಭವಿಷ್ಯದಲ್ಲಿ ಹೇಗಿರಲಿದೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಈಗಲೇ ಅನೇಕ ಕಡೆ ಸೋಂಕು ಹರಡಿದೆ. ಕೇರಳದಲ್ಲಿ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ವಿದೇಶಗಳಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆತುರಕ್ಕೆ ಬಿದ್ದು ಶೂಟಿಂಗ್ ಶುರು ಮಾಡಿದರೂ, ಅದರಿಂದ ಚಿತ್ರದಲ್ಲಿ ಕೆಲಸ ಮಾಡುವವರಿಗೆ ಅಪಾಯವಾಗಬಹುದು ಎಂಬ ಆಲೋಚನೆಯಿಂದ ಸದ್ಯಕ್ಕೆ ಶೂಟಿಂಗ್ ಟೇಕ್ ಆನ್ ಮಾಡದಿರಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಸ್ಕ್ರಿಪ್ಟ್ ರೆಡಿ ಇದೆ, ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಎಲ್ಲರೂ ಸಜ್ಜಾಗಿದ್ದೇವೆ. ಆದರೆ, ಕೊರೊನಾ ಪರಿಸ್ಥಿತಿಯನ್ನು ಹೇಗೆಂದು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರ ಭದ್ರತೆ ಮುಖ್ಯ. ಶೂಟಿಂಗ್ ಇವತ್ತಲ್ಲ ಅಂದ್ರೂ ನಾಳೆ ಮಾಡಬಹುದು. ಈಗ ಮೂರನೇ ಅಲೆಯ ಭೀತಿ ಹೆಚ್ಚಿದೆ. ಇಂತಹ ಸಮಯದಲ್ಲಿ ಮುಂದಾಲೋಚನೆ ಇಲ್ಲದೇ ಶೂಟಿಂಗ್ ಶುರು ಮಾಡಿ, ಏನಾದರೂ ಅಪಾಯ ಆದರೆ ಅದರಿಂದ ನಮ್ಮವರಿಗೆ ನಷ್ಟ. ಮದಕರಿ ನಾಯಕ, ಹೈದರಾಲಿ, ಸೈನಿಕರು ಹೀಗೆ ತುಂಬಾ ಕಲಾವಿದರು ಭಾಗಿಯಾಗುವ ದೃಶ್ಯಗಳು ಹೆಚ್ಚು. ಇನ್ನಷ್ಟು ದಿನ ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next