ರಾಜವರ್ಧನ್ ಮತ್ತು ತಪಸ್ವಿನಿ ಪೂಣಚ್ಚ ಜೋಡಿಯಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ “ಗಜರಾಮ’ನ ಚಿತ್ರೀಕರಣಕ್ಕೆ ಚಾಲನೆ ದೊರೆತಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ “ಗಜರಾಮ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ನಟ ಅಭಿಷೇಕ್ ಅಂಬರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಸುಮಾರು ಒಂದು ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ, ಯೋಗರಾಜ್ ಭಟ್, ಸೂರಿ, ಬಿ. ಸುರೇಶ್ ಮೊದಲಾದ ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಸುನೀಲ್ ಕುಮಾರ್ ವಿ. ಎ “ಗಜರಾಮ’ನಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. “ಲೈಫ್ ಲೈನ್ ಫಿಲಂಸ್’ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಸಿನಿಮಾದ ಮುಹೂರ್ತದ ಬಳಿಕ ಮಾತನಾಡಿದ ನಾಯಕ ರಾಜವರ್ಧನ್, “ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್ ಆ್ಯಂಡ್ ಔಟ್ ಲವ್ ಕಂ ಆ್ಯಕ್ಷನ್ ಕಥಾಹಂದರದ ಸಿನಿಮಾ. ನಾಯಕನ ಮುಗ್ಧ ಪ್ರೀತಿ, ನಡುವೆ ಎದುರಾಗುವ ಸವಾಲುಗಳು ಹೀಗೆ ಒಂದಷ್ಟು ವಿಷಯಗಳ ಸುತ್ತ ಸಿನಿಮಾ ನಡೆಯುತ್ತದೆ. ಮಾಸ್ ಕಂಟೆಂಟ್, ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿದೆ. ಈಗಷ್ಟೇ ಸಿನಿಮಾ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಪಾತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇನೆ’ ಎಂದರು.
ನಿರ್ದೇಶಕ ಸುನೀಲ್ ಕುಮಾರ್ ವಿ. ಎ ಮಾತನಾಡಿ, “ನಮ್ಮ ನಡುವಿನ ಹುಡುಗರ ಜೀವನದಲ್ಲಿ ನಡೆಯುವಂಥದ್ದೇ ಒಂದು ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಎಲ್ಲರಿಗೂ ಕನೆಕ್ಟ್ ಆಗುವಂಥ ಸಬೆjಕ್ಟ್ ಸಿನಿಮಾದಲ್ಲಿದೆ’ ಎಂದು ಕಥಾಹಂದರ ಬಗ್ಗೆ ವಿವರಣೆ ನೀಡಿದರು.
“ಸಿನಿಮಾಕ್ಕೆ ಬರಬೇಕೆಂಬ ಯೋಚನೆಯಿರಲಿಲ್ಲ. ಆದ್ರೆ “ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಬರುವಂತಾಯಿತು. ಅದಾದ ನಂತರ ಇದೀಗ “ಗಜರಾಮ’ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಹಳ್ಳಿ ಹುಡುಗಿಯಾಗಿ ಈ ಸಿನಿಮಾ ದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಟನೆಗೆ ಸಾಕಷ್ಟು ಅವಕಾಶವಿರುವಂಥ ಪಾತ್ರ ಈ ಸಿನಿಮಾ ದಲ್ಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು ನಾಯಕಿ ತಪಸ್ವಿನಿ ಪೂಣಚ್ಚ.
ಸಂಗೀತ ನಿರ್ದೇಶಕ ಮನೋಮೂರ್ತಿ, ನಟ ದೀಪಕ್ ಪ್ರಿನ್ಸ್, ನಿರ್ಮಾಪಕ ನರಸಿಂಹಮೂರ್ತಿ ವಿ., ಛಾಯಾಗ್ರಹಕ ಕೆ. ಎಸ್ ಚಂದ್ರಶೇಖರ್, ಸಹ ನಿರ್ಮಾಪಕರಾದ ಕ್ಸೇವಿಯರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಕಾಶಿ, ನೃತ್ಯ ನಿರ್ದೇಶಕ ಧನಂಜಯ್, ಗೀತ ಸಾಹಿತಿ ಚಿನ್ಮಯ್ ಭಾವಿಕೆರೆ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಗಜರಾಮ’ನ ಬಗ್ಗೆ ಒಂದಷ್ಟು ಮಾತನಾಡಿದರು.