Advertisement

ಪಂತ್‌ ಪಡೆಗೆ ಮಹತ್ವದ ಪಂದ್ಯ; ರಾಜಸ್ಥಾನ್‌ ರಾಯಲ್ಸ್‌ ಎದುರಾಳಿ

01:47 AM May 11, 2022 | Team Udayavani |

ನವೀ ಮುಂಬಯಿ: ಐಪಿಎಲ್‌ ಪ್ಲೇ ಆಫ್ ಲೆಕ್ಕಾಚಾರಗಳು ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಬುಧವಾರ ಮುಖಾಮುಖಿಯಾಗಲಿವೆ.

Advertisement

ರಿಷಭ್‌ ಪಂತ್‌ ಪಡೆಗೆ ಇದು ಮಹತ್ವದ ಪಂದ್ಯ. ಅದು, ಗೆದ್ದರಷ್ಟೇ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲಿದೆ ಎಂಬ ಸ್ಥಿತಿಯಲ್ಲಿದೆ.

11 ಪಂದ್ಯಗಳಲ್ಲಿ ಐದನ್ನಷ್ಟೇ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ 5ನೇ ಸ್ಥಾನದಲ್ಲಿದೆ. ಆದರೆ ಇನ್ನೊಂದು ಮೆಟ್ಟಿಲು ಮೇಲೆರುವುದು ಅಷ್ಟು ಸುಲಭವಲ್ಲ. ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ತೀವ್ರ ಒತ್ತಡ ಡೆಲ್ಲಿ ಮೇಲಿದೆ. ಒಂದರಲ್ಲಿ ಸೋತರೂ ಕ್ಯಾಪಿಟಲ್ಸ್‌ ಗೇಟ್‌ ಬಹುತೇಕ ಮುಚ್ಚಲಿದೆ.

ಇನ್ನೊಂದೆಡೆ ರಾಜಸ್ಥಾನ್‌ ಸುಸ್ಥಿತಿಯಲ್ಲಿದೆ. ಅದು ಕೂಡ 11 ಪಂದ್ಯ ಆಡಿದೆ. ಏಳರಲ್ಲಿ ಗೆದ್ದಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್ ಹಾದಿ ಬಹುತೇಕ ಖಾತ್ರಿಯಾಗಲಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಈ ಗೆಲುವನ್ನು ಒಲಿಸಿಕೊಳ್ಳುವುದು ಸಂಜು ಸ್ಯಾಮ್ಸನ್‌ ಪಡೆಯ ಯೋಜನೆ.

ಡೆಲ್ಲಿ ಅಸ್ಥಿತರ ಪ್ರದರ್ಶನ
ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಸಂಪನ್ಮೂಲ, ಉತ್ತಮ ಮಾರ್ಗದರ್ಶನ ಹೊಂದಿದ್ದೂ ಇದರ ಪ್ರಯೋಜನ ಎತ್ತುವಲ್ಲಿ ವಿಫ‌ಲವಾಗಿದೆ. ಕೂಟದ ಅತ್ಯಂತ ಅಸ್ಥಿರ ತಂಡಗಳಲ್ಲಿ ಖಂಡಿತವಾಗಿಯೂ ಡೆಲ್ಲಿಗೆ ಅಗ್ರಸ್ಥಾನ. ಈ ಋತುವಿನಲ್ಲಿ ಅದು ಸತತ ಎರಡು ಪಂದ್ಯಗಳನ್ನು ಗೆದ್ದದ್ದೇ ಇಲ್ಲ. 10ನೇ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಮೂರೇ ವಿಕೆಟಿಗೆ 207 ರನ್‌ ರಾಶಿ ಹಾಕಿದ ಡೆಲ್ಲಿ, ಕೊನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ 117ಕ್ಕೆ ಲಾಗ ಹಾಕಿತ್ತು. ತಂಡದ ಬೌಲಿಂಗ್‌, ಬ್ಯಾಟಿಂಗ್‌ ವಿಭಾಗಗಳೆರಡೂ ಕೈಕೊಟ್ಟಿದ್ದವು. ಅಲ್ಲದೇ ರಾಜಸ್ಥಾನ್‌ ಎದುರಿನ ಮೊದಲ ಸುತ್ತಿನ ಪಂದ್ಯದಲ್ಲಿ 15 ರನ್‌ ಸೋಲನುಭವಿಸಿತ್ತು.ಹೀಗಾಗಿ ಡೆಲ್ಲಿಗೆ ಇದು ಸೇಡಿನ ಪಂದ್ಯವೂ ಹೌದು.

Advertisement

ಡೆಲ್ಲಿ ಪಾಲಿನ ಪ್ಲಸ್‌ ಪಾಯಿಂಟ್‌ ಎಂದರೆ ರನ್‌ರೇಟ್‌. ಅದೀಗ +0.150ರಲ್ಲಿದೆ. ಪ್ಲೇ ಆಫ್ನ 4ನೇ ಸ್ಥಾನಕ್ಕೆ ಪೈಪೋಟಿ ಎದುರಾದಾಗ ಈ ರನ್‌ರೇಟ್‌ ಡೆಲ್ಲಿಯ ಕೈ ಹಿಡಿಯುವ ಎಲ್ಲ ಸಾಧ್ಯತೆ ಇದೆ. ಆದರೆ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಲು ಡೆಲ್ಲಿಯಿಂದ ಸಾಧ್ಯವೇ ಎಂಬುದಷ್ಟೇ ಪ್ರಶ್ನೆ.

ಓಪನರ್‌ ಪೃಥ್ವಿ ಶಾ ಅನಾರೋಗ್ಯಕ್ಕೆ ಸಿಲುಕಿರುವುದರಿಂದ ಡೆಲ್ಲಿಗೆ ನಷ್ಟವೇನೂ ಇಲ್ಲ. ಶಾ ಈ ಸರಣಿಯಲ್ಲಿ ಮಿಂಚಿದ ನಿದರ್ಶನ ಅಪರೂಪ. ಆದರೆ ಶಾ ಬದಲಿಗೆ ಬಂದ ಮನ್‌ದೀಪ್‌ ಸಿಂಗ್‌, ಶ್ರೀಕರ್‌ ಭರತ್‌ ಕೂಡ ಲಭಿಸಿದ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ವಾರ್ನರ್‌, ಮಾರ್ಷ್‌, ಪಂತ್‌, ಪೊವೆಲ್‌… ಎಲ್ಲರದೂ ಅಸ್ಥಿರ ಬ್ಯಾಟಿಂಗ್‌. ಬೌಲಿಂಗ್‌ನಲ್ಲಿ ಮಿಸ್ಟರಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಮಿಂಚಿದರಷ್ಟೇ ತಂಡಕ್ಕೆ ಗೆಲುವು ಎಂಬ ಸ್ಥಿತಿ ಇದೆ. ವೇಗಿ ಆ್ಯನ್ರಿಚ್‌ ನೋರ್ಜೆ ಮರಳಿದರೂ ವಿಶೇಷ ಪರಿಣಾಮ ಬೀರಿಲ್ಲ.

ರಾಜಸ್ಥಾನ್‌ ಬಲಿಷ್ಠ
ಡೆಲ್ಲಿಗೆ ಹೋಲಿಸಿದರೆ ರಾಜಸ್ಥಾನ್‌ ರಾಯಲ್ಸ್‌ ಅತ್ಯಂತ ಬಲಿಷ್ಠ ತಂಡ. ಪಂಜಾಬ್‌ ಎದುರಿನ ಹಿಂದಿನ ಪಂದ್ಯದಲ್ಲಿ 190 ರನ್‌ ಬೆನ್ನಟ್ಟಿ ಗೆದ್ದ ಪರಾಕ್ರಮವೊಂದೇ ಸಾಕು, ಸ್ಯಾಮ್ಸನ್‌ ಪಡೆಯ ತಾಕತ್ತು ಏನೆಂಬುದು ಅರಿವಿಗೆ ಬರುತ್ತದೆ. ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿರುವವರೆಲ್ಲ ಹಾರ್ಡ್‌ ಹಿಟ್ಟರ್‌ಗಳೇ ಆಗಿದ್ದಾರೆ. ಒಬ್ಬರಲ್ಲ ಒಬ್ಬರು ಸಿಡಿದು ನಿಂತೇ ನಿಲ್ಲುತ್ತಾರೆ. ಉತ್ತಮ ಉದಾಹರಣೆ ಯಶಸ್ವಿ ಜೈಸ್ವಾಲ್‌. ಪಂಜಾಬ್‌ ವಿರುದ್ಧದ ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಜೈಸ್ವಾಲ್‌ 68 ರನ್‌ ಸಿಡಿದು ಭದ್ರ ಬುನಾದಿ ನಿರ್ಮಿಸಿದ್ದರು. ಬಟ್ಲರ್‌, ಸ್ಯಾಮ್ಸನ್‌, ಪಡಿಕ್ಕಲ್‌, ಹೈಟ್‌ಮೈರ್‌, ಪರಾಗ್‌… ಎಲ್ಲರೂ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನು ತೆರೆದಿಟ್ಟು ತಂಡದ ಗೆಲುವಿಗೆ ಶ್ರಮಿಸಿದ್ದಾರೆ. ಬೌಲ್ಟ್, ಪ್ರಸಿದ್ಧ್ ಕೃಷ್ಣ, ಕುಲದೀಪ್‌ ಸೇನ್‌, ಅಶ್ವಿ‌ನ್‌-ಚಹಲ್‌ ಬೌಲಿಂಗ್‌ ವಿಭಾಗದ ಹೀರೋಗಳು.

ಆರೇಂಜ್‌ ಮತ್ತು ಪರ್ಪಲ್‌ ಕ್ಯಾಪ್‌ಧಾರಿಗಳಿಬ್ಬರೂ ರಾಜಸ್ಥಾನ್‌ ತಂಡದಲ್ಲಿರುವುದು ವಿಶೇಷ. ಇವರೆಂದರೆ ಜಾಸ್‌ ಬಟ್ಲರ್‌ ಮತ್ತು ಚಹಲ್‌. ಬಟ್ಲರ್‌ 3 ಶತಕ, 3 ಅರ್ಧ ಶತಕಗಳ ನೆರವಿನೊಂದಿಗೆ 618 ರನ್‌ ಬಾರಿಸಿದ್ದಾರೆ. ಚಹಲ್‌ ಹ್ಯಾಟ್ರಿಕ್‌ ಸೇರಿದಂತೆ ಸರ್ವಾಧಿಕ 22 ವಿಕೆಟ್‌ ಕೆಡವಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next