ಜೈಪುರ: ರಾಜಸ್ಥಾನದ ಕಾಂಗ್ರೆಸ್ ಪಕ್ಷದೊಳಗಿನ ಜಗಳ ಮುಂದುವರದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮತ್ತೆ ವಾಕ್ಸಮರ ನಡೆದಿದೆ.
ಸಚಿನ್ ಪೈಲಟ್ ಅವರು ತಮ್ಮ ಜನ ಸಂಘರ್ಷ ಯಾತ್ರೆಯ ವೇಳೆ ಮಾಡಿದ್ದ ಆರೋಪಗಳಿಗೆ ಸಿಎಂ ಗೆಹ್ಲೋಟ್ ತಿರುಗೇಟು ನೀಡಿದ್ದಾರೆ. ಅಶೋಕ್ ಗೆಹ್ಲೋಟ್ ಅವರಿಗೆ ಸೋನಿಯಾ ಗಾಂಧಿ ನಾಯಕಿಯಲ್ಲ. ಬಿಜೆಪಿಯ ವಸುಂಧರಾ ರಾಜೆ ಅವರು ಗೆಹ್ಲೋಟ್ ಗೆ ನಾಯಕಿ ಎಂದು ಪೈಲಟ್ ಟೀಕೆ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಗೆಹ್ಲೋಟ್, ‘ತಮ್ಮ ರಾಜಕೀಯ ಜೀವನದಲ್ಲಿ ಗಾಂಧಿ ಕುಟುಂಬ ದೊಡ್ಡ ಕೊಡುಗೆ ನೀಡಿದೆ. ತನ್ನನ್ನು ಶಾಸಕ, ಪಕ್ಷದ ರಾಜ್ಯಾಧ್ಯಕ್ಷ, ಮೂರು ಬಾರಿ ಮುಖ್ಯಮಂತ್ರಿ ಮಾಡಿದ್ದಾರೆ. ನನ್ನ ನಾಯಕ ಯಾರು ಎಂದು ಬೇರೆ ಯಾರೋ ಯಾಕೆ ಹೇಳಬೇಕು” ಎಂದಿದ್ದಾರೆ.
ಪೈಲಟ್ ಜೊತೆಗಿನ ವೈಮನಸ್ಸಿನ ಬಗ್ಗೆ ಮೌನ ಮುರಿದಿರುವ ಗೆಹ್ಲೋಟ್, “ಎಲ್ಲರೂ ಒಟ್ಟಾಗಿ ರಾಜ್ಯ ಚುನಾವಣೆಯನ್ನು ಎದುರಿಸಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಜೊತೆಗಿನ ಚರ್ಚೆಯಲ್ಲಿ ನಿರ್ಣಯಿಸಲಾಗಿತ್ತು. ಹೈಕಮಾಂಡ್ ನಿರ್ದೇಶನದಂತೆ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ನಾನು ನಂಬುತ್ತೇನೆ. ಯಾಕೆಂದರೆ ದೇಶಕ್ಕೆ ಕಾಂಗ್ರೆಸ್ ನ ಅಗತ್ಯವಿದೆ’ ಎಂದು ಹೇಳಿದರು.
ಇದನ್ನೂ ಓದಿ:Veteran actor Kazan Khan: ಹೃದಯಾಘಾತದಿಂದ ಖ್ಯಾತ ಖಳನಟ ಕಜನ್ ಖಾನ್ ನಿಧನ
ಸಚಿನ್ ಪೈಲಟ್ ಆರೋಪವನ್ನು ನಿರಾಕರಿಸುವ ಗೆಹ್ಲೋಟ್, “ವಸುಂಧರಾ ರಾಜೇ ವಿರುದ್ಧದ ನಾಲ್ಕು ಪ್ರಕರಣಗಳನ್ನು ನಾವು ಬಗೆಹರಿಸಿದ್ದೇವೆ ಎಂದು ಸ್ಪಷ್ಟಪಡಿಸುತ್ತೇನೆ. ಕೆಲವು ಪ್ರಕರಣಗಳು ಈಗಾಗಲೇ ನ್ಯಾಯಾಲಯದಿಂದ ತೀರ್ಪುಗಳನ್ನು ಪಡೆದಿವೆ. ಒಂದು ಪ್ರಕರಣವು ಜಾರಿ ನಿರ್ದೇಶನಾಲಯದ (ಇಡಿ) ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಬೇರೆ ಯಾವುದೇ ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ” ಎಂದರು.