Advertisement

ಸಚಿನ್‌ ಪೈಲಟ್‌ ಸೋಮಾರಿ ; ಮಾಜಿ ಸಹೋದ್ಯೋಗಿ ವಿರುದ್ಧ ಗೆಹಲೋಟ್‌ ಬಹಿರಂಗ ಆಕ್ರೋಶ

01:07 PM Jul 21, 2020 | mahesh |

ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವಿನ ಕಾಳಗ ತಾರಕಕ್ಕೇರಿದೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿರುವ ಗೆಹಲೋಟ್, ಸಚಿನ್‌ ಅವರೊಬ್ಬ ನಾಲಾಯಕ್‌ ವ್ಯಕ್ತಿ ಎಂದು ಜರಿದಿದ್ದಾರೆ. ಮತ್ತೂಂದೆಡೆ, ಸಚಿನ್‌ ತನಗೆ ಪಕ್ಷ ತೊರೆದರೆ 35 ಕೋಟಿ ರೂ. ಕೊಡುವ ಆಮಿಷವೊಡ್ಡಿದ್ದರೆಂದು ಶಾಸಕ ಗಿರಿರಾಜ್‌ ಸಿಂಗ್‌ ಮಾಲಿಂಗ ಆರೋಪಿಸಿದ್ದಾರೆ. ಆದರೆ, ಸಚಿನ್‌ ಪೈಲಟ್‌ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹಲೋಟ್‌, ನನ್ನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್‌ ಪೈಲಟ್‌ ಒಬ್ಬ ನಾಲಾಯಕ್‌ ಹಾಗೂ ಸೋಮಾರಿ ವ್ಯಕ್ತಿಯಾಗಿದ್ದು, ಅವರಿಂದ ಯಾವುದೇ ಉತ್ತಮ ಕಾರ್ಯಗಳನ್ನು ನಿರೀಕ್ಷಿಸುವಂತಿರಲಿಲ್ಲ” ಎಂದಿದ್ದಾರೆ. “ಸಚಿನ್‌ ಅವರಿಗೆ ಕೆಲಸ ಮಾಡಲು ಗೊತ್ತಿಲ್ಲ. ಅವರಿಗೆ ಜನರನ್ನು ಆಡಳಿತದ ವಿರುದ್ಧ ಎತ್ತಿಕಟ್ಟುವುದಷ್ಟೇ ಗೊತ್ತು. ಆದರೆ, ಪಕ್ಷದ ಹಿತದೃಷ್ಟಿಯ ಕಾರಣದಿಂದಾಗಿ ಅವರನ್ನು ನಾನು ಯಾವತ್ತೂ ಪ್ರಶ್ನಿಸಲಿಲ್ಲ. ಹಾಗಂತ ನಾನೇನೂ ಇಲ್ಲಿ ತರಕಾರಿ ಮಾರಲು ಕುಳಿತಿಲ್ಲ. ನಾನೊಬ್ಬ ಮುಖ್ಯಮಂತ್ರಿ ಎಂಬುದನ್ನು ಅವರು ಮರೆತಿದ್ದಾರೆ. ಮುಗ್ಧ ಮುಖಭಾವ, ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ, ಮಾಧ್ಯಮಗಳ ಮೇಲೆ ಪ್ರಭಾವ ಹೊಂದಿರುವಂಥ ಸಚಿನ್‌ ಅವರಿಂದ ಸರಕಾರ ಉರುಳಿಸುವಂಥ ಕೃತ್ಯ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ’ ಎಂದು ಅವರು ಆಪಾದಿಸಿದ್ದಾರೆ.

35 ಕೋಟಿ ರೂ. ಆಫ‌ರ್‌: “ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸುವಂತೆ ತಮಗೆ ಸೂಚನೆ ನೀಡಿದ್ದ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಅವರು ಅದಕ್ಕಾಗಿ 35 ಕೋಟಿ ರೂ. ಆಫ‌ರ್‌ ನೀಡಿದ್ದರು’ ಎಂದು ಕಾಂಗ್ರೆಸ್‌ನ ಬಡಿ ಕ್ಷೇತ್ರದ ಶಾಸಕ ಗಿರಿರಾಜ್‌ ಸಿಂಗ್‌ ಮಾಲಿಂಗ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ ಸರಕಾರವನ್ನು ಅಸ್ಥಿರಗೊಳಿಸಲು ಸಚಿನ್‌ ಪೈಲಟ್‌ ಅವರು, ತಮ್ಮ ಬೆಂಬಲಿಗ ಶಾಸಕರೊಂದಿಗೆ ಹಿಂದಿನಿಂದಲೂ ಷಡ್ಯಂತ್ರ ರಚಿಸಿದ್ದರು ಎಂದು ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯ ಕರು ಆರೋಪ ಮಾಡುತ್ತಿದ್ದು, ಅದನ್ನು ಪೈಲಟ್‌ ನಿರಾಕರಿಸುತ್ತಲೇ ಬಂದಿದ್ದಾರೆ. ಇಂಥ ಸಂದರ್ಭದಲ್ಲೇ ಸಚಿವ್‌ ವಿರುದ್ಧ ಮಾಲಿಂಗ ಅವರು ಮಾಡಿರುವ ಆರೋಪ, ಸ್ಫೋಟಕ ಮಾಹಿತಿಯಂತೆ ರಾಜಸ್ಥಾನದ ರಾಜಕೀಯ ಪಡಸಾಲೆಗಳಲ್ಲಿ ಹರಿದಾಡುತ್ತಿದೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಲಿಂಗ, “”ಈ ಹಿಂದೆ, ಸಚಿನ್‌ ಅವರು ನನ್ನನ್ನು ಭೇಟಿ ಮಾಡಿ, ಬಿಜೆಪಿ ಸೇರುವಂತೆ ಸಲಹೆ ನೀಡಿದ್ದರು. ಅದಕ್ಕಾಗಿ ಹಣದ ಆಮಿಷವನ್ನೂ ನೀಡಿದ್ದರು. ಆದರೆ, ನಾನು ಅವರ ಸಲಹೆಯನ್ನು ನಿರಾಕರಿಸಿದ್ದೆ. ಈಗಾಗಲೇ ಬಿಎಸ್‌ಪಿ ತೊರೆದು ಬಂದು ಕಾಂಗ್ರೆಸ್‌ ಸೇರಿರುವ ನಾನು ಈಗ ಮತ್ತೆ ಪಕ್ಷ ಬದಲಿಸಿದರೆ, ಕ್ಷೇತ್ರದ ಜನರಿಗೆ ಹೇಗೆ ಮುಖ ತೋರಿಸಲಿ ಎಂದು ಯೋಚಿಸಿ ಕಾಂಗ್ರೆಸ್ಸಿನಲ್ಲೇ ಉಳಿಯಲು ನಿರ್ಧರಿಸಿದೆ ಎಂದು ಜೊತೆಗೆ, ಗೆಹಲೋಟ್‌ ಸರಕಾರವನ್ನು ಅತಂತ್ರಗೊಳಿಸುವ ಕುತಂತ್ರ ಕಳೆದ ವರ್ಷ ಡಿಸೆಂಬರ್‌ನಿಂದಲೇ ಆರಂಭವಾಗಿತ್ತು ಎಂದು ತಿಳಿಸಿದ್ದಾರೆ. ಕಳೆದ ವರ್ಷ, ಮಾಲಿಂಗ ಸೇರಿದಂತೆ ಐವರು ಶಾಸಕರು ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಕಾನೂನು ಕ್ರಮ ಕೈಗೊಳ್ಳುವೆ: ಸಚಿನ್‌
ಮಾಲಿಂಗ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಸಚಿನ್‌ ಪೈಲಟ್‌, ಇದು ನನ್ನ ಹೆಸರಿಗೆ ಮಸಿ ಬಳಿಯಲು ಮಾಡಲಾಗಿರುವ ಆರೋಪ. ನನ್ನ ದಕ್ಷತೆಯ ಬಗ್ಗೆ ಅನುಮಾನದಿಂದ ನೋಡುವಂತೆ ಮಾಡಲು ಮಾಡಲಾಗಿರುವ ಪ್ರಯತ್ನ. ಇಂಥ ಹೇಳಿಕೆಗಳ ಮೂಲಕ ಪ್ರಸ್ತುತ ವಿವಾದದ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಮರು ಆರೋಪ ಮಾಡಿದ್ದಾರೆ. ಅಲ್ಲದೆ, ನನ್ನ ವಿರುದ್ಧ ಸುಳ್ಳು ಹೇಳಿರುವ ಮಾಲಿಂಗ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಕ್ರಮಗಳನ್ನು ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.

Advertisement

ಇಂದು ರಾಜಸ್ಥಾನ ಹೈಕೋರ್ಟ್‌ ತೀರ್ಪು
ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಚಿನ್‌ ಪೈಲಟ್‌ ಹಾಗೂ ಅವರ 18 ಆಪ್ತ ಶಾಸಕರ ವಿರುದ್ಧ ಜಾರಿಗೊಳಿಸಲಾಗಿರುವ ಶಾಸಕತ್ವ ಅಸಿಂಧು ನೋಟಿಸ್‌’ ಪ್ರಕರಣದ ವಿಚಾ ರಣೆ ಮಂಗಳವಾರ ಮುಂದುವರಿಯಲಿದೆ. ಜತೆಗೆ ತೀರ್ಪೂ ಪ್ರಕಟವಾಗುವ ಸಾಧ್ಯತೆ ಇದೆ. ಸೋಮವಾರದ ವಿಚಾರಣೆ ವೇಳೆ ಸ್ಪೀಕರ್‌ ಪರವಾಗಿ ವಾದ ಮಂಡಿಸಿದ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ, “”ಶಾಸಕತ್ವ ಅಸಿಂಧುಗೊಳಿಸುವ ಬಗ್ಗೆ ಸ್ಪೀಕರ್‌ ಕೇವಲ ನೋಟಿಸ್‌ ಜಾರಿಗೊ ಳಿಸಿದ್ದಾರೆಯೇ ವಿನಃ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸ್ಪೀಕರ್‌ ನಿರ್ಧಾರ ಕೈಗೊಳ್ಳುವ ಮೊದಲೇ ಈ ಪ್ರಕರಣ ವಿಚಾರಣೆಗೆ ಒಳಪಡುವಂಥದ್ದಲ್ಲ” ಎಂದು ತಿಳಿಸಿದರು.

ನಾನೇ ಷಡ್ಯಂತ್ರ ರೂವಾರಿ ಎಂದು ವ್ಯಕ್ತಿಯೊಬ್ಬರು ಹೇಳಿರುವ ಆಡಿಯೋ ಕ್ಲಿಪ್‌ ಒಂದು ತಮಗೆ ಸಿಕ್ಕಿರುವುದಾಗಿ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ಆದರೆ, ಆ ಕ್ಲಿಪ್‌ ಪೊಲೀಸರ ಕೈಗೆ ಹೇಗೆ ಸಿಕ್ಕಿತು ಎಂಬುದು ಪ್ರಶ್ನಾರ್ಹವಾಗಿದೆ. ಅದರ ಬಗ್ಗೆಯೇ ಪ್ರತ್ಯೇಕವಾಗಿ ತನಿಖೆಯಾಗಬೇಕಿದೆ.
ಗಜೇಂದ್ರ ಸಿಂಗ್‌ ಶೆಖಾವತ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next