ನವದೆಹಲಿ: ಚುನಾವಣೆ ಸಂದರ್ಭದಲ್ಲಿನ ಪ್ರಚಾರದ ವೇಳೆ ಅಭ್ಯರ್ಥಿಗಳು, ಆಯಾಯ ಪಕ್ಷದ ಸಚಿವರು, ಉಸ್ತುವಾರಿಗಳು ವಿವಿಧ ರೀತಿಯ ಭರವಸೆ, ಸವಾಲುಗಳನ್ನು ಹಾಕುತ್ತಾರೆ. ಆದರೆ ಫಲಿತಾಂಶದ ನಂತರ ತಮ್ಮ ಹೇಳಿಕೆಯಿಂದ ನುಣುಚಿಕೊಳ್ಳುವವರೇ ಹೆಚ್ಚು. ಅದಕ್ಕೆ ಅಪವಾದ ಎಂಬಂತೆ ರಾಜಸ್ಥಾನದ ಬಿಜೆಪಿ ಮುಖಂಡ ಕಿರೋಡಿ ಲಾಲ್ ಮೀನಾ ತಾವು ಚುನಾವಣ ಪ್ರಚಾರದ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರಸಂಗ ನಡೆದಿದೆ.
ಇದನ್ನೂ ಓದಿ:
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ತಮ್ಮ ಹೊಣೆಗಾರಿಕೆ ಇರುವ ಏಳು ಲೋಕಸಭಾ ಸ್ಥಾನಗಳಲ್ಲಿ ಯಾವುದೇ ಕ್ಷೇತ್ರದಲ್ಲೂ ಪಕ್ಷ ಸೋಲನ್ನು ಕಂಡತೆ ತಾನು ಸಚಿವ ಸ್ಥಾನದಿಂದ ಕೆಳಗಿಳಿಯುವುದಾಗಿ ಕಿರೋಡಿ ಲಾಲ್ ಬಹಿರಂಗವಾಗಿ ಹೇಳಿದ್ದರು.
ಚುನಾವಣಾ ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಿ ಮೀನಾ ಅವರ ದೌಸಾ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಪರಾಜಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಿರೋಡಿ ಲಾಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.
ರಾಜಸ್ಥಾನದ 25 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 14 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರ ಪಕ್ಷಗಳು ಮೂರು ಕ್ಷೇತ್ರಗಳಲ್ಲಿ ಜಯ ಗಳಿಸಿದ್ದವು. ಮೀನಾ ಅವರು ಕೃಷಿ ಮತ್ತು ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ವಿಪತ್ತು ನಿರ್ವಹಣಾ ಸಚಿವರಾಗಿದ್ದರು.