ಜೈಪುರ: ಪಾಕಿಸ್ಥಾನಿ ಮಹಿಳೆಯನ್ನು ಮದುವೆಯಾಗಿ ಕುವೈತ್‌ನಲ್ಲಿ ಕೆಲಸದಲ್ಲಿದ್ದ ದ್ದ 35 ವರ್ಷದ ರಾಜಸ್ಥಾನದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ದೂರವಾಣಿ ಮೂಲಕ ತ್ರಿವಳಿ ತಲಾಖ್ ನೀಡಿದ್ದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಂಧಿತ ರೆಹಮಾನ್ ಎಂಬಾತನಾಗಿದ್ದು ಪಾಕಿಸ್ಥಾನಿ ಮಹಿಳೆ ಮೆಹ್ವಿಶ್ ಎಂಬಾಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಿಚಯಮಾಡಿಕೊಂಡು ಸೌದಿ ಅರೇಬಿಯಾದಲ್ಲಿ ವಿವಾಹವಾಗಿದ್ದ. ಮೆಹ್ವಿಶ್ ಪ್ರವಾಸಿ ವೀಸಾದಲ್ಲಿ ಕಳೆದ ತಿಂಗಳು ಚುರುಗೆ ಬಂದು ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹನುಮಾನ್‌ಗಢದ ಭದ್ರಾ ನಿವಾಸಿ ಫರೀದಾ ಬಾನೋ (29) ಕಳೆದ ತಿಂಗಳು ತನ್ನ ಪತಿ ರೆಹಮಾನ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹನುಮಾನ್‌ಗಢ ಉಪ ಎಸ್‌ಪಿ ರಣವೀರ್ ಸಿಂಗ್ ಹೇಳಿದ್ದಾರೆ.
ಸೋಮವಾರ(Aug 12) ಕುವೈತ್‌ನಿಂದ ಬಂದಿಳಿದ ರೆಹಮಾನ್ ನನ್ನು ಹನುಮಾನ್‌ಗಢದ ಪೊಲೀಸರ ತಂಡ ಜೈಪುರ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿ ಮರುದಿನವೇ ಬಂಧಿಸಿದ್ದಾರೆ.
ರೆಹಮಾನ್ ಮತ್ತು ಫರೀದಾ ಬಾನೊ 2011 ರಲ್ಲಿ ವಿವಾಹವಾಗಿದ್ದು ಒಬ್ಬ ಮಗ ಮತ್ತು ಮಗಳ ಪೋಷಕರಾಗಿದ್ದಾರೆ. ರೆಹಮಾನ್ ಜೀವನೋಪಾಯಕ್ಕಾಗಿ ಕುವೈತ್‌ಗೆ ಹೋಗಿ ಅಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ.
ಮೆಹ್ವಿಶ್ ಚುರುಗೆ ಬಂದ ನಂತರ, ಹನುಮಾನ್‌ಗಢದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಫರೀದಾ ಬಾನೊ ರೆಹಮಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.