“ಕ್ಯಾ ಕಸೂರ್ ಥಾ ಮೇರಾ ಜೋ ಮೇರಿ ಸರ್ಕಾರ್ ಗಿರಾಯಿ?” (ನಾನೇನು ತಪ್ಪು ಮಾಡಿದೆ? ನನ್ನ ಸರ್ಕಾರವನ್ನೇಕೆ ಪತನಗೊಳಿಸಿದಿರಿ?)
ಕಳೆದ ತಿಂಗಳು ಮಧ್ಯಪ್ರದೇಶ ಚುನಾವಣಾ ರ್ಯಾಲಿ ವೇಳೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್(77) ಕೇಳಿದ ಪ್ರಶ್ನೆಯಿದು. ಜ್ಯೋತಿರಾದಿತ್ಯ ಸಿಂದಿಯಾರನ್ನು ಬಿಜೆಪಿ ಸೆಳೆಯುವ ಮೂಲಕ 15 ತಿಂಗಳ ಅವಧಿಯ ತಮ್ಮ ಸರ್ಕಾರವನ್ನು ಪತನ ಗೊಳಿಸಲಾಯಿತು ಎಂಬರ್ಥದಲ್ಲಿ ಅಂದು “ಸಿಂಪಥಿ ಕಾರ್ಡ್’ ಪ್ರಯೋಗಿಸಿದ್ದರು ಕಮಲ್‌ನಾಥ್!
ಆದರೆ, ಮಧ್ಯಪ್ರದೇಶದ ಜನರು ಕಮಲ್‌ನಾಥ್ ಪರ ದಯೆ ತೋರಲಿಲ್ಲ. ಮತ್ತೂಮ್ಮೆ ತಮಗೆ ಸಿಎಂ ಕುರ್ಚಿ ಪ್ರಾಪ್ತಿಯಾಗುತ್ತದೆ ಎಂದು ಕಾದಿದ್ದ ಕಮಲ್, ಈಗ ಮುಖ ಮುದುಡಿಸಿಕೊಂಡು ಮನೆಯತ್ತ ಹೆಜ್ಜೆಯಿಟ್ಟಿದ್ದಾರೆ.
ಮೊನ್ನೆಯವರೆಗೂ ಅವರು “ಕಾಂಗ್ರೆಸ್ ಗ್ಯಾರಂಟಿ’ ಗಳನ್ನೇ ನಂಬಿಕೊಂಡು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರು. ಅಲ್ಲದೇ, ಪ್ರಚಾರದ ಸಮಯ ದಲ್ಲೂ ಜ್ಯೋತಿರಾದಿತ್ಯ ಸಿಂದಿಯಾ ತನ್ನ ಬೆನ್ನಿಗೆ ಚೂರಿ ಇರಿದರು ಎನ್ನುವುದನ್ನು ಒತ್ತಿಹೇಳುತ್ತಿದ್ದರು. ರಾಜ್ಯದ ಜನರು ಸಿಂದಿಯಾ ವಿರುದ್ಧ ಪ್ರತೀಕಾರ ತೀರಿಸುತ್ತಾರೆ ಎಂಬ ಲೆಕ್ಕಾಚಾರ ಅವರದ್ದಾಗಿತ್ತು. ಆದರೆ, ಇದ್ಯಾವುದೂ ಅನುಕಂಪದ ಮತಗಳಾಗಿ ಪರಿವರ್ತನೆ ಯಾಗಲಿಲ್ಲ.
ಕಮಲ್‌ನಾಥ್ “ವಾಸ್ತವ’ವನ್ನು ಮರೆತರು. ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ದಿನಕ್ಕೆ 10-12 ರ್ಯಾಲಿಗಳನ್ನು ನಡೆಸಿದರೆ, ಕಮಲ್‌ನಾಥ್ ಕೇವಲ 2-3 ರ್ಯಾಲಿಗಳಿಗೆ ಸೀಮಿತವಾದರು. ಶಿವರಾಜ್ ಅವರ ಪರಿಶ್ರಮದ ಮುಂದೆ ಕಮಲ್‌ನಾಥ್‌ರದ್ದು ಲೆಕ್ಕಕ್ಕೇ ಬರಲಿಲ್ಲ. ಮಧ್ಯಪ್ರದೇಶದ ಜನರು “ಕಮಲ್’ರನ್ನು ಹಿಂದಕ್ಕೆ ತಳ್ಳಿ, “ಕಮಲ’ವನ್ನು ಅರಳಿಸಿದರು. ಸಿಎಂ ಆಗಿ ಪೂರ್ಣಪ್ರಮಾಣದ ಅಧಿಕಾರವನ್ನು ಅನುಭವಿಸಬೇಕು ಎಂಬ ಕಮಲ್‌ನಾಥ್ ಕನಸು ಕನಸಾಗಿಯೇ ಉಳಿಯಿತು. ಈ ಸೋಲು ಅವರ ರಾಜಕೀಯ ಜೀವನದ ಮೇಲೆ ಪರದೆ ಎಳೆಯಿತು.