ಜೈಪುರ: 12 ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಮುಸ್ಲಿಂ ಶಿಕ್ಷಕಿಯೊಂದಿಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಬಿಕಾನೇರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಿದಾ ಬಹ್ಲೀಮ್, ಅದೇ ಶಾಲೆಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಜೊತೆ ಪರಾರಿಯಾಗಿದ್ದಾರೆ. ಇಬ್ಬರು ನಾಪತ್ತೆಯಾಗಿರುವ ಕುರಿತು ಎರಡೂ ಕುಟುಂಬದ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜೂ.30 ರಂದು ಬಾಲಕಿ ನಾಪತ್ತೆಯಾಗಿದ್ದು,ಬಾಲಕಿಗಾಗಿ ಸ್ನೇಹಿತರ ಮನೆ, ಸಂಬಂಧಿಕರ ಮನೆಯಲ್ಲಿ ಮೊದಲು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಯಾವುದೇ ಸುಳಿವು ಸಿಗದ ಕಾರಣ ಈ ಕುರಿತು ಜು.3 ರಂದು ಬಾಲಕಿ ಮನೆಯವರು ದೂರು ನೀಡಿದ್ದಾರೆ. ಶಿಕ್ಷಕಿ ನಿದಾ ಕಳೆದ ಎರಡು ತಿಂಗಳಿನಿಂದ ಬಾಲಕಿ ಜೊತೆ ಆತ್ಮೀಯವಾಗಿದ್ದಳು. ಆಕೆಯನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದಳು. ಬಾಲಕಿಯನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಿಸುವ ಉದ್ದೇಶದಿಂದ ಶಿಕ್ಷಕಿ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಜೈಪುರ ರೈಲು ನಿಲ್ದಾಣದಲ್ಲಿ ಎರಡು ದಿನಗಳ ನಂತರ ನಾವು ಇಬ್ಬರನ್ನೂ ಒಟ್ಟಿಗೆ ನೋಡಿದ್ದೇವೆ. ಅವರು ಎಲ್ಲಿದ್ದಾರೆ ಎನ್ನುವುದು ಈಗ ನಮಗೆ ತಿಳಿದಿಲ್ಲ ಎಂದು ಬಾಲಕಿಯ ಕುಟುಂಬದವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿ ಮತ್ತು ಆಕೆಯ ಶಿಕ್ಷಕಿ ದೀರ್ಘ ಕಾಲದಿಂದ ಸಂಬಂಧ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿದ್ಯಾರ್ಥಿನಿ ಮತ್ತು ಆಕೆಯ ಶಿಕ್ಷಕರ ಪತ್ತೆಗೆ ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಈ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿದ್ದು,ಬಿಕಾನೇರ್‌ನ ಶ್ರೀ ಡುಂಗರ್‌ಗಢ್ ಪಟ್ಟಣದ ವ್ಯಾಪಾರಿಗಳು ಮಂಗಳವಾರ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆಯನ್ನು ನಡೆಸಿದ್ದಾರೆ.