Advertisement

ಗೆಹ್ಲೋಟ್‌ ವಿರುದ್ಧ ಸಿಡಿದ ಪೈಲಟ್‌ ; ಪತನದ ಭೀತಿಯಲ್ಲಿ ರಾಜಸ್ಥಾನ ಕಾಂಗ್ರೆಸ್‌ ಸರಕಾರ

03:25 AM Jul 13, 2020 | Hari Prasad |

ಹೊಸದಿಲ್ಲಿ/ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ರಾಜ್ಯ ಕಾಂಗ್ರೆಸ್‌ ಘಟಕ ಹೋಳಾಗುವ ಸ್ಥಿತಿ ತಲುಪಿದೆಯಲ್ಲದೆ ಸರಕಾರವೂ ಪತನ ಹೊಂದುವ ಲಕ್ಷಣಗಳು ಗೋಚರಿಸಿವೆ.

Advertisement

ಇದರ ಮಧ್ಯೆಯೇ ಹಾನಿ ಸರಿಪಡಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ತತ್‌ಕ್ಷಣವೇ ಜೈಪುರಕ್ಕೆ ಮರಳುವಂತೆ ಸಚಿನ್‌ ಪೈಲಟ್‌ಗೆ ಸೂಚಿಸಿದೆ. ಗೆಹ್ಲೋಟ್‌ ಅಡಿಯಲ್ಲೇ ಕೆಲಸ ಮಾಡುವಂತೆಯೂ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಇದರ ಜತೆಗೆ ಮೂವರು ವೀಕ್ಷಕರನ್ನು ಜೈಪುರಕ್ಕೆ ಕಳುಹಿಸಲಾಗಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ಸಿಎಂ ನಿವಾಸದಲ್ಲಿ ಸಭೆ ನಡೆಯಲಿದೆ.

ಸಚಿನ್‌ ಪೈಲಟ್‌ ಅವರು ರವಿವಾರ ಸಂಜೆ ರಾಹುಲ್‌ ಗಾಂಧಿ ಜತೆಗೂ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ವಾಪಸ್‌ ತೆರಳುವಂತೆ ರಾಹುಲ್‌ ಅವರೂ ಸೂಚಿಸಿದರು ಎನ್ನಲಾಗಿದೆ.

30 ಶಾಸಕರ ಬೆಂಬಲವಿದೆ: ಸಚಿನ್‌
‘ನನ್ನ ಬೆಂಬಲಕ್ಕೆ 30 ಶಾಸಕರಿದ್ದಾರೆ. ಗೆಹ್ಲೋಟ್‌ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಸಿಎಂ ಸೋಮವಾರ ಕರೆದಿರುವ ಪಕ್ಷದ ಶಾಸಕಾಂಗ ಸಭೆಗೆ ತಾವು ಹಾಜರಾಗುವುದಿಲ್ಲ’ ಎಂದೂ ಸಚಿನ್‌ ತಿಳಿಸಿದ್ದಾರೆ. ಈ ನಡುವೆ, ಪೈಲಟ್‌ ಜತೆ ದಿಲ್ಲಿಗೆ ತೆರಳಿದ್ದ ಮೂವರು ಶಾಸಕರು ರವಿವಾರ ರಾತ್ರಿ ಜೈಪುರಕ್ಕೆ ಹಿಂದಿರುಗಿದ್ದು, ಕಾಂಗ್ರೆಸ್‌ನಲ್ಲೇ ಇರುವುದಾಗಿ ತಿಳಿಸಿದ್ದಾರೆ.

Advertisement

ಆಂತರಿಕ ಮೂಲಗಳು ಹೇಳುವುದೇನು?
ರಾಜಸ್ಥಾನ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಗೆಹ್ಲೋಟ್‌ ಜತೆಗೆ ಸಚಿನ್‌ ಸಂಬಂಧ ಉತ್ತಮವಾಗಿಲ್ಲ. ಅದರ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ ನಡೆದಂತೆ ರಾಜಸ್ಥಾನದಲ್ಲಿಯೂ ಕೆಲವು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ಆರಂಭಕ್ಕೂ ಮುನ್ನವೇ ಸಚಿನ್‌ ಪೈಲಟ್‌ ಮತ್ತು ಬಿಜೆಪಿ ನಾಯಕರ ನಡುವೆ ಮಾತುಕತೆ ನಡೆಯುತ್ತಿತ್ತು. ಆಗ ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಸರಕಾರ ಕೆಡವಿದರೆ ಸಚಿನ್‌ ಪೈಲಟ್‌ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಬಿಜೆಪಿ ಅದಕ್ಕೆ ಸಿದ್ಧವಿಲ್ಲ. ಬಿಜೆಪಿಯ ಈ ನಿಲುವು ಸಚಿನ್‌ಗೆ ಇಷ್ಟವಾಗಿಲ್ಲ. ಅಂಥ ಸಂದರ್ಭ ಬಂದರೆ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಲು ಪೈಲಟ್‌ ಆಲೋಚಿಸಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್‌ನ ಕೆಲವು ನಾಯಕರು ಹೇಳಿದ್ದಾರೆ.

ಕಪಿಲ್‌ ಸಿಬಲ್‌ ಆತಂಕ
ಕಾಂಗ್ರೆಸ್‌ ಅಧಿಕಾರವಿರುವ ರಾಜ್ಯಗಳಲ್ಲಿ ಪಕ್ಷದೊಳಗೆ ಭಿನ್ನಮತ ತಲೆದೋರಿದಾಗ ಪಕ್ಷದ ಕೇಂದ್ರ ನಾಯಕತ್ವ ಬೇಗನೇ ಎಚ್ಚೆತ್ತುಕೊಂಡು ಅದನ್ನು ಶಮನಗೊಳಿಸಲು ಪ್ರಯತ್ನಿಸಬೇಕು. ಪರಿಸ್ಥಿತಿ ಕೈ ಮೀರಿದಾಗ ಪ್ರಯತ್ನಿಸಿದರೆ ಅದು ಸಾಧ್ಯವಾಗದು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಸಿಂಧಿಯಾ ಖೇದ
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ನಾನು ಮತ್ತು ಸಚಿನ್‌ ಹಳೆಯ ಸ್ನೇಹಿತರು. ಕಾಂಗ್ರೆಸ್‌ ನನ್ನನ್ನೂ ಈ ಹಿಂದೆ ಮೂಲೆಗುಂಪಾಗಿಸಿತ್ತು. ಈಗ ಮಿತ್ರ ಸಚಿನ್‌ ಅವರನ್ನೂ ಮೂಲೆಗುಂಪಾಗಿಸಿರುವುದು ಬೇಸರ ತರಿಸಿದೆ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸಿಂಧಿಯಾ ಇದೇ ವರ್ಷದ ಆರಂಭದಲ್ಲಿ ಪಕ್ಷ ತೊರೆದು ಬೆಂಬಲಿಗರೊಡನೆ ಬಿಜೆಪಿ ಸೇರಿದ್ದರು. ಆ ಬೆಳವಣಿಗೆಯಿಂದಾಗಿ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಮಲ್‌ನಾಥ್‌ ನೇತೃತ್ವದ ಸರಕಾರ ಪತನಗೊಂಡಿತ್ತು.

ವಿವಾದದ ಕಿಡಿ ಹೊತ್ತಿಸಿದ ನೋಟಿಸ್‌?
ಇತ್ತೀಚೆಗಿನ ರಾಜ್ಯಸಭಾ ಚುನಾವಣೆ ವೇಳೆ ಮೂವರು ಪಕ್ಷೇತರ ಶಾಸಕರು ಕಾಂಗ್ರೆಸ್‌ ಶಾಸಕರಿಗೆ ಲಂಚ ನೀಡಲು ಮುಂದಾಗಿದ್ದ ವಿಚಾರ ವಿವಾದ ಸೃಷ್ಟಿಸಿತ್ತು. ಹೀಗಾಗಿ ಆ ಪ್ರಕರಣವನ್ನು ರಾಜಸ್ಥಾನ ಸರಕಾರದ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಇದರ ಜತೆಯಲ್ಲೇ ರಾಜಸ್ಥಾನ ಪೊಲೀಸ್‌ ಇಲಾಖೆಯಿಂದ ವಿಶೇಷ ಕಾರ್ಯಪಡೆ (ಎಸ್‌ಪಿಜಿ) ರಚಿಸಿ ಆ ಮೂಲಕವೂ ತನಿಖೆ ನಡೆಸಲಾಗುತ್ತಿದೆ.

ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಡಿಸಿಎಂ ಸಚಿನ್‌ ಪೈಲಟ್‌ ಅವರ ಹೇಳಿಕೆ ಪಡೆಯಲು ಮುಂದಾಗಿರುವ ಎಸ್‌ಪಿಜಿ ಅವರಿಬ್ಬರಿಗೂ ನೋಟಿಸ್‌ ಜಾರಿಗೊಳಿಸಿದೆ. ಅಧಿಕಾರಿಗಳು ಬಂದು ಸಚಿನ್‌ ಮನೆಯ ಬಾಗಿಲಿಗೆ ನೋಟಿಸ್‌ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ಸಚಿನ್‌ ಅವರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಇಂದಿನ ದಿನಗಳಲ್ಲಿ ಬಿಜೆಪಿ ವಾಮಮಾರ್ಗಗಳ ಮೂಲಕ ಅಧಿಕಾರ ಪಡೆಯುವುದರಲ್ಲಿ ನಿರತವಾಗಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಮಾಡಿದ್ದನ್ನೇ ಈ ವರ್ಷ ಮಧ್ಯಪ್ರದೇಶದಲ್ಲಿ ಮಾಡಿತ್ತು. ಈಗ ರಾಜಸ್ಥಾನದಲ್ಲೂ ಅದನ್ನೇ ಮುಂದುವರಿಸಿದೆ.
– ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next