Advertisement
ಡಾ|ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾಗಿದ್ದ ಡಾ|ರಾಜಶೇಖರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ಪುಣೆಯ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಸನ್ಮಾನ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಅವರ ಮಡಿಲಿಗೆ ಸಂದಿವೆ.
Related Articles
Advertisement
ಜೈಪುರ ಅತ್ರೌಲಿ ಘರಾಣೆಯ ಉಪಜ್ ಅಂಗದ ಪುರಾತನ ಗಾಯನ ಶೈಲಿ ಅನುಕರಿಸುತ್ತಿದ್ದ ಅವರು, ಸಂಗೀತದ ಬಗ್ಗೆ ವಿದ್ಯಾರ್ಥಿಗಳ ಜತೆ ಅನೇಕ ಅನುಸಂಧಾನಗಳನ್ನು ನಡೆಸಿದ್ದರು. ಧಾರವಾಡ ಅವರ ಕರ್ಮ ಸ್ಥಾನವಾದರೂ ಇತ್ತೀಚಿನ ಕೆಲ ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರು ಜೋಡ್ ರಾಗಗಳನ್ನು ಹಾಡುವುದಲ್ಲಿ ಸಿದ್ಧಹಸ್ತರಾಗಿದ್ದರು.
ಧಾರವಾಡ ತಾಲೂಕಿನ ಮನಸೂರ ಗ್ರಾಮದವರಾದ ಅವರು ತಮ್ಮ ಶಿಕ್ಷಣವನ್ನು ಧಾರವಾಡದಲ್ಲಿಯೇ ಪಡೆದಿದ್ದರು. ತಂದೆ ಮಲ್ಲಿಕಾರ್ಜುನ ಮನಸೂರ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತಿದ್ದ ಅವರು ಅತ್ಯಂತ ವಿಶಿಷ್ಟ ಕಿರಾಣೆಗಳನ್ನು ಹಾಡಿ, ಸಂಗೀತ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಿದ್ದರು. ಜೈಪುರ ಅತ್ರೌಲಿ ಎಂಬ ವಿಶಿಷ್ಟ ಸಂಗೀತ ಕಲಾ ಪ್ರಕಾರ ಸೇರಿದಂತೆ ಅನೇಕ ಹೊಸ ರಾಗಗಳನ್ನು ಸೃಜಿಸಿದ ಕೀರ್ತಿ ರಾಜಶೇಖರ ಮನಸೂರರಿಗೆ ಸಲ್ಲುತ್ತದೆ. ಕರ್ನಾಟಕದವರಾಗಿದ್ದರೂ ಉತ್ತರ ಭಾರತದ ಹಿಂದೂಸ್ತಾನಿ ಕಛೇರಿಗಳಿಗೆ ಅತ್ಯಂತ ಉತ್ಸಾಹದಿಂದ ಹೋಗುತ್ತಿದ್ದರು.
ಮುಂಬೈ, ಪುಣೆ, ದೆಹಲಿ, ಲಕ್ನೋ, ಜೈಪುರ, ಭೂಪಾಲ್ ಸೇರಿದಂತೆ ಅನೇಕ ಕಡೆಗಳಲ್ಲಿ ತಮ್ಮದೇ ಶೈಲಿಯ ಸಂಗೀತ ಕಛೇರಿಗಳನ್ನು ನೀಡಿದ್ದರು. ಅಪ್ಪಟ ದೇಸಿತನವನ್ನು ಮೈಗೂಡಿಸಿಕೊಂಡಿದ್ದ ಅವರು ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಅದ್ಭುತ ಕೆಲಸ ಮಾಡಿದ್ದರು. ಯುವ ಸಂಗೀತಗಾರರನ್ನು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಬೆಳೆಸಲು ಸದಾ ಮುಂಚೂಣಿ ಪಾತ್ರ ವಹಿಸಿದ್ದರು. ಕ್ಷೇತ್ರದ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದರು.
ಉತ್ತರ ಕರ್ನಾಟಕದ ಜೀವನ ಶೈಲಿ, ಭಾಷೆ, ಆಹಾರ ಕ್ರಮ ಹಾಗೂ ಜಾನಪದೀಯ ಸಂಗೀತವನ್ನು ಸದಾ ಮೆಲುಕು ಹಾಕುತ್ತಿದ್ದರು. ತಮ್ಮ ತಂದೆಯಂತೆಯೇ ಸಂಗೀತ ಸಾಮ್ರಾಟರಾಗಿ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದರು. ಪಂ|ಸೋಮನಾಥ ಮರಡೂರ, ಪಂ|ವೆಂಕಟೇಶಕುಮಾರ, ಪಂ|ಗಣಪತಿ ಭಟ್ ಹಾಸಣಗಿ ಅವರ ಸಮಕಾಲೀನವರಾದ ಡಾ|ರಾಜಶೇಖರ ಹಿಂದೂಸ್ತಾನಿ ಸಂಗೀತದ ಮೇರು ಪ್ರತಿಭೆಯಾಗಿದ್ದರು.
ಪ್ರಶಸ್ತಿಗಳ “ಗೌರವ’: ಆಲ್ ಇಂಡಿಯಾ ರೇಡಿಯೋದಲ್ಲಿ ಉನ್ನತ ದರ್ಜೆ ಶ್ರೇಣಿಯ (ಎ+) ಗಾಯಕರಾಗಿದ್ದ ಅವರಿಗೆ 1997ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡು (2005-2008) ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ (2009) ಗೆ ಭಾಜನರಾಗಿದ್ದರು.ರಾಜಶೇಖರ ಮನ್ಸೂರ ಅವರ ಸಂಗೀತವನ್ನು ಭೋಪಾಲ್‌ನ ಇಂದಿರಾ ಗಾಂಧಿ ಮಾನವ ಸಂಗ್ರಹಾಲಯದ ಆರ್ಕೈವ್‌ನಲ್ಲಿ ಸಂರಕ್ಷಿಸಲಾಗಿದೆ.
ಭಾರತದ ಸಂಗೀತ, ನೃತ್ಯ ರಾಷ್ಟ್ರೀಯ ಅಕಾಡೆಮಿಯಿಂದ 2012ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ಸಣ್ಣ ಭರಮಣ್ಣ ಸ್ಮಾರಕ ರಾಷ್ಟ್ರೀಯ ಪುರಸ್ಕಾರವನ್ನು ಚೆನ್ನೈನ ತಾನ್ಸೆನ್ ಅಕಾಡೆಮಿ ಆಫ್ ಮ್ಯೂಸಿಕ್ ನೀಡಿ ಗೌರವಿಸಿತ್ತು.