ರಾಜಾಪೂರ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪೂರದಲ್ಲಿ ವ್ಯಕ್ತಿವೊರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.
ನೇಣಿಗೆ ಶರಣಾದ ವ್ಯಕ್ತಿ ರಾಜಾಪೂರ ಗ್ರಾಮದ ಗಂಗಪ್ಪ ಪೀರಪ್ಪ ವಡೆಯರ (50) ಎಂದು ತಿಳಿದು ಬಂದಿದೆ. ತಾನೂ ಮಾಡಿದ ಅಪಘಾತವೇ ಇತನ ಸಾವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಒಂದು ತಿಂಗಳ ಹಿಂದೆ ರಾಯಭಾಗದಲ್ಲಿ ಬೈಕ್ ಅಪಘಾತವೊಂದು ಸಂಭವಿಸಿ, ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಆ ಅಪಘಾತ ಸಂಭವಿಸಲು ಈತನೇ ಕಾರಣವೆಂದು ರಾಯಭಾಗ ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನಾಗಿ ಪ್ರಕರಣ ದಾಖಲು ಮಾಡಿದ್ದರು. ಅಪಘಾತವಾದ ಬೈಕಿಗೆ ಸರಿಯಾದ ದಾಖಲೆಗಳು ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಆರೋಪ ಸಾಬೀತಾದರೆ ತನ್ನ ಆಸ್ತಿಯನ್ನು ಮಾರಬೇಕಾಗುತ್ತದೆ ಎಂದು ಈತ ಹೆದರಿ ಮಾನಸಿಕವಾಗಿ ನೊಂದುಕೊಂಡು ಸಾರಾಯಿ ಕುಡಿಯಲು ಪ್ರಾರಂಭಿಸಿದನೆಂದು ಹೇಳಲಾಗುತ್ತಿದೆ.
ಹೀಗೆ ಪ್ರತಿದಿನ ಕುಡಿದು ಅಡ್ಡಾಡಲು ಪ್ರಾರಂಭಿಸಿದ ಈ ವ್ಯಕ್ತಿ ಗುರುವಾರ (ದಿ.16) ಸಾಯಂಕಾಲದಿಂದ ಕಾಣೆಯಾಗಿದ್ದನು. ಮಾರನೇ ದಿನವಾದರೂ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಯವರು ಸಂಬಂಧಿಕರಿಗೆಲ್ಲ ಪೋನ್ ಮಾಡಿ ವಿಚಾರಿಸಿದ್ದು, ಕುಡಿದು ಎಲ್ಲಿಯೋ ಹೋಗಿರಬಹುದು ಮತ್ತೆ ಮನೆಗೆ ವಾಪಸ್ಸು ಬರುತ್ತಾನೆಂದು ಸುಮ್ಮನಾಗಿದ್ದಾರೆ. ಆದರೆ ಗಂಗಪ್ಪ ಮಾತ್ರ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ರಾಜಾಪೂರದ ಹೊರ ವಲಯದ ಹೊಲದಲ್ಲಿದ್ದ ಬಾವಿಯ ಪಕ್ಕದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ಕಟೀಲ್ ವಿಶ್ವಾಸ
ರವಿವಾರ(ದಿ.19) ಬೆಳಗ್ಗೆ 6 ಗಂಟೆ ಸುಮಾರಿಗೆ ಆ ಹೊಲದ ಮಾಲೀಕ ಗದ್ದೆಗೆ ನೀರು ಹಾಯಿಸಲೆಂದು ಬಾವಿ ಕಡೆ ಹೋದಾಗ ಈ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆಯನ್ನು ಆರಂಭಿಸಿದ್ದಾರೆ.