ಹೊಸದಿಲ್ಲಿ: ಅಲ್ಲಿ ತುಂತುರು ಮಳೆ. ಆದರೆ, ದೇಶಭಕ್ತಿಯನ್ನು ಒದ್ದೆ ಮಾಡಲು ಆ ಹನಿಗಳು ಸೋತಿದ್ದಕ್ಕೆ ಒಂದೇ ಕಾರಣ, ಗಣರಾಜ್ಯೋತ್ಸವದ ಸಂಭ್ರಮ. ಬಾನಿನ ಹನಿಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡುವ ಉತ್ಸಾಹದಲ್ಲಿ ಎಲ್‌ಸಿಎ ತೇಜಸ್ ಯುದ್ಧವಿಮಾನ 300 ಮೀಟರ್ ಎತ್ತರದಲ್ಲಿ ಮನರಂಜನೆಯ ಯುದ್ಧಕ್ಕಿಳಿದಾಗ ಎಲ್ಲರಲ್ಲೂ ಹರ್ಷೋದ್ಗಾರ. ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಯುದ್ಧವಿಮಾನ ತೇಜಸ್ ರಾಜ್‌ಪಥ್‌ನ ನಭವನ್ನು ರಂಗೇರಿಸಿತ್ತು. ಎನ್‌ಎಸ್‌ಜಿ ಕಮಾಂಡೋ ಪಡೆಯ ಒಂದು ತುಕಡಿ ಭವ್ಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದಾಗಲೂ ಲಕ್ಷಾಂತರ ಕೈಗಳ ಚಪ್ಪಾಳೆಗಳು ಬಿದ್ದವು.
ಇವೆಲ್ಲ ರಂಗುರಂಗಿನ, ವೀರೋಚಿತ ಚಿತ್ರಗಳು ಕಂಡುಬಂದಿದ್ದು ರಾಜ್‌ಪಥ್‌ನ ಅಂಗಳದಲ್ಲಿ ನಡೆದ 67ನೇ ಗಣರಾಜ್ಯೋತ್ಸವದಲ್ಲಿ. ಭಾರತೀಯ ಸೇನೆಯ ಸಾಮರ್ಥಯವನ್ನು ತೋರ್ಪಡಿಸಲು ಯುದ್ಧವಿ ಮಾನಗಳು ತೆರೆದಿಟ್ಟ ಹುರುಪಿಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಅಬುಧಾಬಿ ರಾಜಕುಮಾರ ಝಾಯೇದ್ ಅಲ್ ನಹ್ಯಾಮ್ ಹುಬ್ಬೇರಿಸಿದರು. ಸುಖೋಯ್ ಯುದ್ಧವಿಮಾನ, ಸುದರ್ಶನ ಚಕ್ರ, ಜಾಗ್ವಾರ್ ವಿಮಾನ, 5 ಮಿಗ್ ವಿಮಾನ ಮತ್ತು ಎಂಐ 17 ಹೆಲಿಕಾಪ್ಟರ್‌ಗಳು ಒಂದಾದ ಮೇಲೆ ಒಂದರಂತೆ ನಡೆಸಿದ ಹಾರಾಟ ಕಣ್ಣಿನ ದೃಷ್ಟಿಯನ್ನು ಬಾನಿನಲ್ಲೇ ಕಳೆದುಹೋಗುವಂತೆ ಮಾಡಿತ್ತು. ವಾಯುಪಡೆಯ 31 ವಿಮಾನಗಳು ಆಗಸದಲ್ಲಿ ಹರಡಿದ್ದ ಕರಿಮೋಡದ ರಂಗನ್ನೇ ಬದಲಿಸಿಬಿಟ್ಟವು.
ಯುಎಐ ಯೋಧರ ಪೆರೇಡ್: ಈ ಬಾರಿಯ ಗಣರಾಜ್ಯೋತ್ಸವದ ಹೈಲೈಟ್ ಇದು. ಅಬುಧಾಬಿ ರಾಜಕುಮಾರ ಝಾಯೇದ್ ಅಲ್ ನಹ್ಯಾಮ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರಿಂದ ಆ ದೇಶದ ಅಧ್ಯಕ್ಷೀಯ ರಕ್ಷಕ ದಳ, ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಒಟ್ಟು 149 ಯೋಧರು ಭವ್ಯ ಪೆರೇಡ್ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ಸ್ತಬ್ಧ ಚಿತ್ರಗಳ ಆಕರ್ಷಣೆ: ಇವೆಲ್ಲಕ್ಕೂ ಮೊದಲು 17 ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಕಲಾಸಂಸ್ಕೃತಿಯನ್ನು ಪ್ರತಿನಿಧಿಸಿದ್ದ ಸ್ತಬ್ಧಚಿತ್ರಗಳು ಒಂದೊಂದು ಕತೆ ಹೇಳುತ್ತಿದ್ದವು. ಕೇಂದ್ರ ಸರಕಾರದ 6 ಇಲಾಖೆಯ ಮಹತ್ವದ ಯೋಜನೆಗಳನ್ನು ಹೊತ್ತ ಸ್ತಬ್ಧಚಿತ್ರಗಳು, ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಬೃಹತ್ ಪ್ರತಿಮೆ ಮಹಾರಾಷ್ಟ್ರದ ಪ್ರಧಾನ ಧ್ವನಿಯಾಗಿತ್ತು.
ದಾದಾಗೆ ಅಶೋಕ ಚಕ್ರ
ಜಮ್ಮು ಮತ್ತು ಕಾಶ್ಮೀರದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಮೂವರು ಉಗ್ರರ ಹತ್ಯೆ ಮಾಡಿ, ಕಡೆಗೆ ವೀರ ಮರಣವನ್ನಪ್ಪಿದ್ದ ಯೋಧ ಹವಾಲ್ದಾರ್ ಹ್ಯಾಂಗ್‌ಪನ್ ದಾದಾ ಅವರ ಪತ್ನಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಶೋಕ ಚಕ್ರ ಪ್ರದಾನ ಮಾಡಿದರು. ದಾದಾ ಪತ್ನಿ ಚೂಸನ್ ಲವಾಂಗ್ ಅವರು ಕಣ್ಣೀರಿನಿಂದಲೇ ಗೌರವ ಸ್ವೀಕರಿಸಿದರು. ಕಳೆದ ವರ್ಷದ ಮೇ 26 ರಂದು ನೌಗಮ್ ವಲಯದಲ್ಲಿ ದಾದಾ ಕಾಳಗ ನಡೆಸಿದ್ದರು.