ಹೈದರಾಬಾದ್: ನಿರ್ದೇಶಕ ರಾಜಮೌಳಿ, ಮತ್ತೊಂದು ಬಹುನಿರೀಕ್ಷಿತ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಸಿನಿಮಾಸಕ್ತರಲ್ಲಿ ಕುತೂಹಲ ಕೆರಳಿಸಿದೆ.
ಹೌದು, ಯುಗಾದಿ ದಿನ ಆರ್ ಆರ್ ಆರ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇಲ್ಲಿಯವರೆಗೂ ಆರ್ ಆರ್ ಆರ್ ಅಂದರೇ ರಘುಪತಿ ರಾಘವ ರಾಜಾರಾಮ್ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಅಸಲಿಯತ್ತು ಬಯಲಾಗಿದ್ದು, ರೌದ್ರಂ, ರಣಂ, ರುಧೀರಂ ಎಂದು ಟೈಟಲ್ ನಲ್ಲಿ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ.
ರೌದ್ರನಾಗಿ ರಾಮ್ ಚರಣ್ ತೇಜ, ರುಧೀರನಾಗಿ ಜೂನಿಯರ್ ಎನ್ ಟಿ ಆರ್ ನಾಯಕರಾಗಿ ನಟಿಸುತ್ತಿದ್ದು, ರಣ ಯಾರೆಂಬುದು ಸದ್ಯದ ಮಟ್ಟಿಗೆ ಕುತೂಹಲ ಏರ್ಪಟ್ಟಿದೆ. ಈ ಸಿನಿಮಾ ಐತಿಹಾಸಿಕ ಹಿನ್ನಲೆಯದ್ದು ಎಂದು ಊಹಿಸಲಾಗಿದೆ.
ಈ ಸಿನಿಮಾ ತೆಲುಗಿನ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿ ರಾಜ ಮೌಳಿ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ತೆರಕಾಣಲಿದೆ. ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಅಲಿಯಾ ಭಟ್ ಸಹ ನಟಿಸುತ್ತಿದ್ದಾರೆ.
ಕೋವಿಡ್-19 ಭೀತಿ ಹಿನ್ನಲೆಯಲ್ಲಿ ಆರ್ ಆರ್ ಆರ್ ಸಿನಿಮಾದ ಶೂಟಿಂಗ್ ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ. 350 ಕೋಟಿ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು ವಿವಿ ದಾನಯ್ಯ ಬಂಡವಾಳ ಹೂಡುತ್ತಿದ್ದಾರೆ. ಕನ್ನಡದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.