Advertisement

ಮೀನುಗಾರಿಕೆ ದಕ್ಕೆಯ ಪರಿಸರಕ್ಕೆ ಧಕ್ಕೆ ತಂದ ರಾಜಕಾಲುವೆ !

10:58 PM Mar 21, 2021 | Team Udayavani |

ಮಹಾನಗರ: ನಗರದ ಪಾಂಡೇಶ್ವರ ಭಾಗದಿಂದ ಮೀನುಗಾರಿಕೆ ದಕ್ಕೆಯ ಕಡೆಗೆ ಹರಿದು ಬರುವ ನಗರದ ಬಹುಮುಖ್ಯ ರಾಜಕಾಲುವೆಯು ಹಲವು ಕಾಲದಿಂದ ಒಳಚರಂಡಿ ನೀರಿನಿಂದಾಗಿ ಗಬ್ಬೆದ್ದು ಹೋಗಿದೆ.

Advertisement

ರಾಜಕಾಲುವೆ ಹರಿದು ಬರುವ ವ್ಯಾಪ್ತಿ ಯಲ್ಲಿನ ಕೆಲವು ಮನೆ, ಅಪಾರ್ಟ್‌ಮೆಂಟ್‌, ಅಂಗಡಿ, ಹೊಟೇಲ್‌ಗ‌ಳ ಒಳಚರಂಡಿ ನೀರನ್ನು ರಾಜಕಾಲುವೆಗೆ ನೇರವಾಗಿ ಬಿಡುತ್ತಿರುವುದರ ಪರಿಣಾಮ ಮಳೆ ನೀರು ಹರಿದು ಹೋಗುವ ರಾಜಕಾಲುವೆಯು ಈಗ ಕೊಳಚೆ ನೀರಿನಿಂದಾಗಿ ದುರ್ವಾಸನೆ, ಅಪಾಯ ಸೃಷ್ಟಿಸಿದೆ.

ಮೌನಕ್ಕೆ ಜಾರಿರುವುದು ಆಶ್ಚರ್ಯ! :

ಒಳಚರಂಡಿ ನೀರು ಹರಿದು ನೇರವಾಗಿ ಮೀನುಗಾರಿಕೆ ದಕ್ಕೆಯ ಮೂಲಕ ನದಿಗೆ ಸೇರುತ್ತಿದೆ. ಇದು ಒಂದೆರಡು ದಿನದ ಕಥೆಯಲ್ಲ; ಪ್ರತೀದಿನದ ಕಥೆ. ಇದೇ ನೀರು ಬಳಿಕ ಸಮುದ್ರ ಸೇರುತ್ತದೆ. ಆ ಮೂಲಕ ಕಡಲನ್ನು ಸಂಪೂರ್ಣ ಹಾಳು ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೀನುಗಾರ ಪ್ರಮುಖರು ಮನವಿ ಮಾಡಿದ್ದರೂ ಯಾರೂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ದೃಶ್ಯವನ್ನು ಕಂಡಿದ್ದರೂ ಜಿಲ್ಲಾಡಳಿತ, ಪಾಲಿಕೆ, ಪರಿಸರ ಇಲಾಖೆ, ಮೀನುಗಾರಿಕೆ ಇಲಾಖೆ ಸಹಿತ ಎಲ್ಲರೂ ಮೌನಕ್ಕೆ ಜಾರಿರುವುದು ಆಶ್ಚರ್ಯ. ಹೀಗಾಗಿ ಒಳಚರಂಡಿ ನೀರು ಈಗಲೂ ದಕ್ಕೆಯ ಚೆಲುವಿಗೇ ಧಕ್ಕೆ ತಂದಿದೆ. ದಕ್ಕೆಯ ಬೋಟ್‌ ರಿಪೇರಿ ಮಾಡುವ ವ್ಯಾಪ್ತಿಯಲ್ಲಿ ಕೊಳಚೆ ನೀರು ಹರಿದು ಹೋಗುತ್ತಿದ್ದು, ಬೋಟ್‌ ನಿಲುಗಡೆ ಮಾಡಿರುವ ಪರಿಸರದಲ್ಲಿ ದುರ್ನಾತದ ನೀರು ವ್ಯಾಪಿಸಿದೆ. ಹೀಗಾಗಿ ದಕ್ಕೆಯ ವಾತಾ ವರಣವೆಲ್ಲ ಕೊಳಚೆ ನೀರಿನಿಂದ ನಾರುತ್ತಿದೆ.

ಸ್ಮಾರ್ಟ್‌ಸಿಟಿಯ ಯಂತ್ರವೂ ಬಾಕಿ!  :

Advertisement

ಹಿಂದಿನ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಇಂತಹ ನೀರನ್ನು ಶುದ್ಧೀಕರಿಸಿ ಅನಂತರ ಕಡಲಿಗೆ ಹರಿಸಬೇಕು ಎಂದು ಸೂಚಿಸಿದ್ದರು. ಹೀಗಾಗಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಯೋಜನೆ ಕೈಗೊಳ್ಳುವ ಬಗ್ಗೆ ಉಲ್ಲೇಖೀಸಿದ್ದರು. ರಾಜಕಾಲುವೆಯಲ್ಲಿ “ಇಟಿಪಿ ಯಂತ್ರ’ ಇಳಿಯಬಿಟ್ಟು ಗಲೀಜು ನೀರನ್ನು ಶುದ್ಧೀಕರಿಸಿ ಆ ಬಳಿಕ ಕಡಲಿಗೆ ಹರಿಯುವಂತೆ ಮಾಡಲು ಉದ್ದೇಶಿಸ ಲಾಗಿತ್ತು. ಆದರೆ ಈ ಯೋಜನೆಯೂ ಈಗ ಕಡತದಲ್ಲಿಯೇ ಬಾಕಿಯಾಗಿದೆ!

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ “ಸುದಿನ’ ಜತೆಗೆ ಮಾತನಾಡಿ, ಮಳೆ ನೀರು ಹರಿದುಬರುವ ರಾಜಕಾಲುವೆಗೆ ಒಳಚರಂಡಿ ನೀರು ಅಲ್ಲಲ್ಲಿ ಬಿಡುತ್ತಿರುವ ಕಾರಣದಿಂದ ದಕ್ಕೆಯಲ್ಲಿ ಮೀನುಗಾರಿಕೆ ಪ್ರದೇಶಕ್ಕೆ ಗಲೀಜು ನೀರು ಬರುತ್ತಿದೆ. ರಾಜಕಾಲುವೆ ಇರುವ ಭಾಗದಲ್ಲಿ ಹಳೆಯ ಕಾಲದ ಒಳಚರಂಡಿಯ ಲೈನ್‌ಗಳನ್ನು ಇದಕ್ಕೆ ಬಿಡಲಾಗಿದೆ. ಹೀಗಾಗಿ ನಗರದ ಹಲವು ಹೊಟೇಲ್‌, ಮನೆಯ ಡ್ರೈನೇಜ್‌ ನೀರು ಇದರಲ್ಲಿ ಬರುತ್ತಿದೆ. ಜಿಲ್ಲಾಡಳಿತ- ಮಂಗಳೂರು ಪಾಲಿಕೆ ಈ ಬಗ್ಗೆ ವಿಶೇಷ ನಿಗಾ ವಹಿಸಬೇಕಿದೆ ಎಂದರು.

ಮೀನುಗಾರ ಮುಖಂಡ ಮೋಹನ್‌ ಬೆಂಗ್ರೆ ಪ್ರಕಾರ, “ಪಾಂಡೇಶ್ವರ ಭಾಗದಿಂದ ಹರಿದುಬರುವ ರಾಜಕಾಲುವೆಯು ಒಳಚರಂಡಿ ನೀರಿನಿಂದ ಮಲಿನವಾಗಿದೆ. ಮೀನುಗಾರಿಕೆ ದಕ್ಕೆಯಲ್ಲಿ ವಾಸನೆ, ಸೊಳ್ಳೆ ಉತ್ಪಾದನೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಾರ್ಟ್‌ಸಿಟಿ ಆಗುತ್ತಿರುವ ನಗರದಲ್ಲಿ ಇಂತಹ ರಾಜಕಾಲುವೆಯನ್ನು ನೋಡಿದರೆ ನಿಜಕ್ಕೂ ನಾಚಿಕೆ ಆಗಬಹುದು’ ಎನ್ನುತ್ತಾರೆ.

ಮೀನುಗಾರರಿಗೆ ದಂಡ-ಕೊಳಚೆ ನೀರಿಗೆ ಯಾರಿಗೆ ದಂಡ? :

ಮೀನುಗಾರಿಕೆಗೆ ತೆರಳುವವರು ಸಮು ದ್ರದಲ್ಲಿ ಸ್ವತ್ಛತೆಯನ್ನು ಕಾಪಾಡುವ ಬಗ್ಗೆ ಮೀನುಗಾರಿಕೆ ಇಲಾಖೆಯು ಹಲವು ನಿರ್ದೇಶನಗಳನ್ನು ನೀಡಿದೆ. ಒಂದು ವೇಳೆ ಪಾಲಿಸದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡುತ್ತಾ ಬಂದಿದೆ. ಈ ಮೂಲಕ ಸಮುದ್ರ ಸ್ವತ್ಛತೆ ಕಾಯ್ದುಕೊಳ್ಳಬೇಕು ಎಂಬುದು ಇಲಾಖೆಯ ಅಭಿಪ್ರಾಯ. ಆದರೆ ಮೀನುಗಾರಿಕೆ ಇಲಾಖೆಯ ಕೂಗಳತೆಯ ದೂರದಲ್ಲಿ ಗಲೀಜು ನೀರು ಪ್ರತೀದಿನ ರಾಜಕಾಲುವೆ ಮೂಲಕ ಸಮುದ್ರ ಸೇರುತ್ತಿದ್ದರೂ ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಮೀನುಗಾರರಿಗೆ ದಂಡ ವಿಧಿ ಸುವ ಇಲಾಖೆ ಕೊಳಚೆ ನೀರಿಗಾಗಿ ಯಾರಿಗೆ ದಂಡ ಹಾಕುತ್ತದೆ ಎಂದು ಮೀನುಗಾರರು ಪ್ರಶ್ನಿಸಿದ್ದಾರೆ.

ಮಂಗಳೂರಿನ ರಾಜಕಾಲುವೆಗೆ ಒಳಚರಂಡಿ ನೀರು ಸಂಪರ್ಕ ಇರುವ ಬಗ್ಗೆ ದೂರುಗಳಿವೆ. ಒಳಚರಂಡಿ ನೀರನ್ನು ರಾಜಕಾಲುವೆಗೆ ಹರಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂತಹ ಪ್ರದೇಶದ ಮೇಲೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.-ಪ್ರೇಮಾನಂದ ಶೆಟ್ಟಿ,  ಮೇಯರ್‌, ಮನಪಾ

ಒಳಚರಂಡಿ ನೀರು ಹರಿದು ಬರುವ ಕಾರಣದಿಂದ ದಕ್ಕೆಯಲ್ಲಿ  ನೀರಿಗಿಳಿದು ಕೆಲಸ ಮಾಡುವವರಿಗೆ ಚರ್ಮರೋಗ ಎದುರಾಗುವ ಅಪಾಯವಿದೆ. ಒಳ ಚರಂಡಿ ನೀರಿನಿಂದಾಗಿ ದಕ್ಕೆಯ ಪರಿಸರ ಸಂಪೂರ್ಣ ಹಾಳಾಗಿದೆ. ಆರೋಗ್ಯ ಇಲಾಖೆಯಾದರೂ ಈ ಬಗ್ಗೆ ಗಮನಹರಿಸಲಿ.  -ರಾಜರತ್ನ ಸನಿಲ್‌,  ಮೀನುಗಾರ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next