ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ಸಂಸ್ಥೆಯ ವತಿಯಿಂದ ಗುರುವಂದನ ಕಾರ್ಯಕ್ರಮವು ಆ. 5 ರಂದು ದಾದರ್ ಪೂರ್ವದ ಕೊಹಿನೂರ್ ಭವನ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ರಂಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ದಾಸು ಸಿ. ಸಾಲ್ಯಾನ್, ಹಿರಿಯ ಸದಸ್ಯರು, ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುಪೂರ್ಣಿಮೆ ಅಂಗವಾಗಿ ಗುರುವಿನ ಗೌರವಾರ್ಥಕವಾಗಿ ವರ್ಷಂಪ್ರತಿ ಸತ್ಕರಿಸುವಂತೆ ಈ ಬಾರಿ ರಜಕ ಸಮಾಜದ ಶಿಕ್ಷಕಿಯರಾದ ಶಾಲಿನಿ ಶಶಿಕಾಂತ್ ಕುಂದರ್ ಮತ್ತು ವಂದನಾ ವಿಶ್ವನಾಥ್ ಕುಂದರ್ ಅವರ ಗುರುವಂದನೆ ನಡೆಯಿತು.
ಶಿಕ್ಷಣ ವಿಭಾಗದ ಕಾರ್ಯಾಧ್ಯಕ್ಷೆ ಸುಮಿತಾ ಡಿ. ಸಾಲ್ಯಾನ್ ಮತ್ತು ಉಪ-ಕಾರ್ಯಾಧ್ಯಕ್ಷ ಸುಭಾಷ್ ಸಾಲ್ಯಾನ್ ಅವರು ಸಮ್ಮಾನಿತರನ್ನು ಪರಿಚಯಿಸಿದರು. ಬಳಿಕ ಪದಾಧಿಕಾರಿಗಳು ಶಶಿಕಾಂತ್ ಕುಂದರ್ ಪರಿವಾರವನ್ನೊಳಗೊಂಡು ಶಾಲು ಹೊದೆಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಮ್‌ರೇಡ್ ಪದವಿ ಗಳಿಸಿದ ಸತೀಶ್ ಗುಜರನ್ ಅವರಿಗೆ ಸಾಧಕ ಪ್ರಶಸ್ತಿಯನ್ನು ಶಾಲು ಹೊದೆಸಿ, ಫಲಪುಷ್ಪ ಸ್ಮರಣಿಕೆಯೊಂದಿಗೆ ಪ್ರದಾನಿಸಲಾಯಿತು. ರಜಕ ಸಂಘ ಮುಂಬಯಿ ಮತ್ತು ಪ್ರಾದೇಶಿಕ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭಹಾರೈಸಿದರು. ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಶಶಾಂಕ್ ಸಾಲ್ಯಾನ್ ಸಮ್ಮಾನಿತರನ್ನು ಪರಿಚಯಿಸಿದರು.
ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಪಲಿಮಾರ್ ಸ್ವಾಗತಿಸಿ ವಂದಿಸಿದರು.