Advertisement

ನೆನಪಿನಲ್ಲುಳಿಯುವ ರಾಜಾ ಯಯಾತಿ-ಗದಾಯುದ್ಧ-ರಕ್ತರಾತ್ರಿ

10:07 PM Mar 28, 2019 | Team Udayavani |

ರಂಗಸ್ಥಳ ಮಂಗಳೂರು ಇದರ ಸಂಯೋಜನೆಯ ತೆಂಕು ಬಡಗಿನ ಕೂಡಾಟ ಮಂಗಳೂರು ಪುರಭವನದಲ್ಲಿ ಜರುಗಿತು. ಪ್ರಸಂಗ “ರಾಜಾ ಯಯಾತಿ-ಗದಾಯುದ್ಧ-ರಕ್ತರಾತ್ರಿ’. ಕೆಲ ದಿನಗಳ‌ ಹಿಂದೆ ತನ್ನ ಭೀಷ್ಮನಿಗೆ ಸಾಳ್ವನಾದ ಹುಡಗೋಡು ಚಂದ್ರಹಾಸರು ಕಣ್ಣೆದುರೇ ರಂಗದಲ್ಲಿ ಕುಸಿದು ಸಾವನ್ನಪ್ಪಿದ ನೋವು ಮಾಸುವ ಮೊದಲೇ ಮಂಗಳೂರಿನ ತನ್ನ ಅಭಿಮಾನಿಗಳಿಗಾಗಿಯೇ ಆಗಮಿಸಿ ಯಯಾತಿ ಪಾತ್ರ ಮಾಡಿದ ಬಳ್ಕೂರರು ಅಮೋಘ ಅಭಿನಯ ನೀಡಿ ರಂಜಿಸಿದರು.

Advertisement

ವೃಷಪರ್ವನ ಕುವರಿ ಶರ್ಮಿಷ್ಠೆ ವನವಿಹಾರಕ್ಕೆಂದು ಗುರುಪುತ್ರಿ ದೇವಯಾನಿಯೊಡನೆ ಬಂದು ನೀರಾಟವಾಡಿ ಮೇಲೆ ಬಂದಾಗ ಪ್ರಮಾದವಶಾತ್‌ ಉಟ್ಟ ಸೀರೆ ಅದಲು ಬದಲಾದುದಕೆ ದೇವಯಾನಿಯನ್ನು ಬಾವಿಗೆ ತಳ್ಳಿದಾಗ ಕಾಪಾಡಿದ ಯಯಾತಿಯೊಂದಿಗೆ ಪ್ರೇಮಾಂಕುರವಾಗಿ ಮದುವೆಯಾಗುತ್ತದೆ. ಮಾಡಿದ ತಪ್ಪಿಗೆ ಶರ್ಮಿಷ್ಠೆ ಜೀವನ ಪರ್ಯಂತ ಆಕೆಯ ದಾಸಿಯಾಗುತ್ತಾಳೆ.ಶರ್ಮಿಷ್ಠೆಗೂ ಮನಸೋತ ಯಯಾತಿ ಆಕೆಯಲ್ಲೂ ಮಕ್ಕಳನ್ನು ಪಡೆಯುತ್ತಾನೆ. ಆ ಸಂದರ್ಭದಲ್ಲಿ ಇಬ್ಬರು ಹೆಂಡಿರ ಮುದ್ಧಿನ ಗಂಡನಾಗಿ ಬಳ್ಕೂರರ ಅಭಿನಯ ನೆನಪಲ್ಲುಳಿಯುವಂತೆಯೂ, ದೇವಯಾನಿ,ಶರ್ಮಿಷ್ಠೆಯರಾಗಿ ನೀಲ್ಕೋಡು,ರಾಜೀವರ ಅಭಿನಯ ಶ್ರೇಷ್ಠಮಟ್ಟದ್ದಾಗಿತ್ತು. ವೃಷಪರ್ವನಾಗಿ ಉಪ್ಪುಂದ ನಾಗೇಂದ್ರ, ಶುಕ್ರಾಚಾರ್ಯನಾಗಿ ಪ್ರೊ| ಶಶಾಂಕ್‌ ಅಮೋಘ ಅಭಿನಯ ನೀಡಿದರು.

ಒಂದೆಡೆ ತನ್ನ ತಂದೆಯ ಅಗಲುವಿಕೆಯ ನೋವು, ಮತ್ತೂಂದೆಡೆ ಹುಡಗೋಡು ಚಂದ್ರಹಾಸರ ಸಾವಿನ ನೋವು , ಮರುದಿನವೇ ತಂದೆಯವರ ವೈಕುಂಠ ಸಮರಾಧನೆ ಇದ್ದರೂ ಈ ಎಲ್ಲಾ ಸಂಕಟಗಳ ಮಧ್ಯೆಯೂ ಜಲವಳ್ಳಿಯವರ ಆ ದಿನದ ಗದಾಯುದ್ಧದ ಕೌರವನ ಅಭಿನಯ ಉತ್ತಮವಾಗಿ ಮೂಡಿಬಂತು. ತಂದೆಯವರು ( ದೃತರಾಷ್ಟ್ರ ) ಹೇಗಿದ್ದಾರೆಂದು ಕೌರವ ಸಂಜಯನಲ್ಲಿ ಕೇಳುವ ಸನ್ನಿವೇಷದಲ್ಲಿ ತನ್ನ ತಂದೆಯ ನೆನಪಾಗಿ ಗಳಗಳನೆ ಅತ್ತು ಸಾವರಿಸಲು ಕನಿಷ್ಠ ಎರಡು ನಿಮಿಷಗಳು ಬೇಕಾಗಿತ್ತು.

73ರ ಹರೆಯದ ಕೊಳ್ತಿಗೆ ನಾರಾಯಣ ಗೌಡರ ಗದಾಯುದ್ಧದ ಭೀಮ ಜಲವಳ್ಳಿಯವರ ಕೌರವನಿಗೆ ಸರಿಮಿಗಿಲಾಗಿ ಅಮೋಘ ಅಭಿನಯದಿಂದ ಮಂತ್ರಮುಗ್ಧರನ್ನಾಗಿಸಿದರು.ಗಂಡಿಮಜಲು ಗೋಪಾಲ ಭಟ್ಟರ ಅಂದಿನ ರಕ್ತರಾತ್ರಿಯ ಅಶ್ವತ್ಥಾಮ ಮೈಮನ ರೋಮಾಂಚನಗೊಳಿಸಿತು. ಇನ್ನುಳಿದಂತೆ ಅಮ್ಮುಂಜೆ,ಚಿಟ್ಟಾಣಿ,ಪೆರುವೊಡಿ,ಪಾಟಾಳಿ,ಇನ್ನಿತರರು ರಂಗದಲ್ಲಿ ಹುಡಿ ಹಾರಿಸಿದರು.ಹಿಲ್ಲೂರು, ಹೊಸಮೂಲೆ, ಬಾಳ್ಕಲ…, ಯನ್‌.ಜಿ., ದೇಲಂತಮಜಲು, ಉಳಿತ್ತಾಯ, ಸಮರ್ಥ ಹಿಮ್ಮೇಳದೊಂದಿಗೆ ಒಂದು ಒಳ್ಳೆಯ ಯಕ್ಷಗಾನ ಚಿರಕಾಲ ನೆನಪಲ್ಲುಳಿಯುವಂತೆ ಮೂಡಿಬಂತು.

ಸದಾಶಿವ ನೆಲ್ಲಿಮಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next