“ತ್ರಿವೇಣಿ ಅಂದರೆ ನನಗೇನೋ ಒಂದು ಸೆಂಟಿಮೆಂಟ್. ಆ ತ್ರಿವೇಣಿಗೋಸ್ಕರವೇ ನಾನು ಇಷ್ಟು ದಿನ ಕಾದಿದ್ದೆ. ಕೊನೆಗೂ ತ್ರಿವೇಣಿ ಸಿಕ್ಕಾಯ್ತು…’
– ಹೀಗೆ ಹೇಳಿ ಹಾಗೊಂದು ನಗೆ ಬೀರಿದರು ನಿರ್ಮಾಪಕ ಎಚ್.ಎಲ್.ಎನ್. ರಾಜ್. ಅವರೇಕೆ ತ್ರಿವೇಣಿ ಹೆಸರು ಹೇಳುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ತ್ರಿವೇಣಿ ಅನ್ನೋ ಪ್ರಶ್ನೆ ಎದುರಾಗಬಹುದು. ಆ ತ್ರಿವೇಣಿ ಬೇರಾರೂ ಅಲ್ಲ, ಮೆಜೆಸ್ಟಿಕ್‌ನಲ್ಲಿರುವ ಚಿತ್ರಮಂದಿರದ ಹೆಸರು. ಅಷ್ಟಕ್ಕೂ ‘ತ್ರಿವೇಣಿ’ ಬಗ್ಗೆ ಅಷ್ಟೊಂದು ಪೀಠಿಕೆ ಯಾಕೆಂದರೆ, ಆ ಚಿತ್ರಮಂದಿರದಲ್ಲಿ ವಿಜಯ್ ರಾಘವೇಂದ್ರ ಅವರ “ನಿನಗಾಗಿ’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈಗ “ರಾಜ ಲವ್ಸ್ ರಾಧೆ’ ಚಿತ್ರದಲ್ಲೂ ವಿಜಯ್ ರಾಘವೇಂದ್ರ ಹೀರೋ. ಈ ಚಿತ್ರ ಕೂಡ “ತ್ರಿವೇಣಿ’ ಚಿತ್ರಮಂದಿರದಲ್ಲೇ ಬಿಡುಗಡೆಯಾಗಬೇಕು ಎಂಬ ಉದ್ದೇಶ ಅವರದು. ಹಾಗಾಗಿ, ಮೇ 18 ರಂದು ತ್ರಿವೇಣಿಯಲ್ಲೇ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು ಎಚ್.ಎಲ್.ಎನ್.ರಾಜ್.
“ಈ ಹಿಂದೆ ಚಿತ್ರ ಮಾಡಿ ಸೋಲು ಕಂಡೆ. ಈಗ ಮಾಡಿದ ಚಿತ್ರವನ್ನು ಎಚ್ಚರದಿಂದ ಮಾಡಿದ್ದೇನೆ. ಕಥೆ ಆಯ್ಕೆ, ಪಾತ್ರಗಳ ಆಯ್ಕೆಯಿಂದ ಹಿಡಿದು, ಪ್ರತಿಯೊಂದರಲ್ಲೂ ಎಚ್ಚರ ವಹಿಸಿದ್ದರಿಂದ “ರಾಜ ಲವ್ಸ್ ರಾಧೆ’ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮನರಂಜನೆಗೆ ಏನೆಲ್ಲಾ ಇರಬೇಕೋ ಎಲ್ಲವೂ ಇಲ್ಲಿದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಮಜ ಎನಿಸುವಷ್ಟು ಕಂಟೆಂಟ್ ಇಲ್ಲಿದೆ. ಎಕ್ಸಾಂ, ಚುನಾಣವೆಯಲ್ಲಿ ತಲೆಬಿಸಿ ಮಾಡಿಕೊಂಡವರಿಗೆ ರಿಫ್ರೆಶ್ ಆಗಲು ಮನರಂಜನೆ ಮಾಧ್ಯಮ ಸಿನಿಮಾ. ಹಾಗಾಗಿ “ರಾಜ ಲವ್ಸ್ ರಾಧೆ’ ನೋಡಲು ಬಂದವರಿಗೆ ಮೋಸ ಆಗಲ್ಲ. ಸುಮಾರು 150 ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ವಿವರ ಕೊಟ್ಟರು.
ನಿರ್ದೇಶಕ ರಾಜಶೇಖರ್‌ಗೆ ಇದು ಎರಡನೇ ಚಿತ್ರ. ಕಥೆ ಮಾಡಿಕೊಂಡು ನಿರ್ಮಾಪಕರನ್ನು ಹುಡುಕುವ ವೇಳೆ ಸಿಕ್ಕಿದ್ದು ಎಚ್.ಎಲ್.ಎನ್.ರಾಜ್ ಅವರಂತೆ. “ಕೆಲಸವಿಲ್ಲದೆ, ವರ್ಷಗಟ್ಟಲೆ ಮನೆಯಲ್ಲಿದ್ದಾಗ, ಈ ಕಥೆ ಬರೆದು, ಪಕ್ಕಾ ಮಾಡಿಕೊಂಡಿದ್ದೆ. ನಿರ್ಮಾಪಕರು ಕಥೆ ಕೇಳಿ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ಇದೊಂದು ಲವ್‌ಸ್ಟೋರಿ ಇರುವ ಚಿತ್ರ. ಹಾಸ್ಯಕ್ಕಂತೂ ಕೊರತೆ ಇಲ್ಲ. ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡೇ ಇದೆ. ಮುಖ್ಯವಾಗಿ ವಿಜಯ್ ರಾಘವೇಂದ್ರ ಅವರು ಪಾತ್ರಕ್ಕೆ ಸರಿಹೊಂದಿದ್ದಾರೆ. ಅವರಲ್ಲಿ ನಗಿಸುವ ಗುಣವಿದೆ. ರವಿಶಂಕರ್ ಇಲ್ಲಿ ಎಲ್ಲರಿಗೂ ಇಷ್ಟವಾಗುತ್ತಾರೆ. ಅಂಥದ್ದೊಂದು ಪಾತ್ರ ಅವರಿಗೆ ಸಿಕ್ಕಿದೆ. ಪ್ರತಿಯೊಬ್ಬರ ಸಹಕಾರದಿಂದ “ರಾಜ ಮತ್ತು ರಾಧೆ’ ಚೆನ್ನಾಗಿ ಕಾಣುತ್ತಾರೆ. ನಿಮ್ಮ ಪ್ರೋತ್ಸಾಹ ಬೇಕೆಂದರು’ ರಾಜಶೇಖರ್.
ವಿಜಯ ರಾಘವೇಂದ್ರ ಅವರಿಲ್ಲಿ ಗ್ಯಾರೇಜ್ ಮೆಕಾನಿಕ್ ಪಾತ್ರ ನಿರ್ವಹಿಸಿದ್ದಾರಂತೆ. ಅವರ ಪ್ರಕಾರ, “ಒಂದು ನಗಿಸುವ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಹಾಸ್ಯ ಕಲಾವಿದರ ದಂಡೇ ಇಲ್ಲಿದೆ. ಮುಖ್ಯವಾಗಿ ಇಲ್ಲಿ ಕಥೆ, ಪಾತ್ರ ಮತ್ತು ಹಾಡುಗಳು ಚೆನ್ನಾಗಿವೆ. ಸಿಂಪಲ್ ಕಥೆಯನ್ನು ಅಷ್ಟೇ ಶ್ರೀಮಂತ ಚಿತ್ರವನ್ನಾಗಿಸಿದ್ದಾರೆ’ ಎಂದರು ವಿಜಯ್ ರಾಘವೇಂದ್ರ.
ನಾಯಕಿ ರಾಧಿಕಾ ಪ್ರೀತಿ, ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರನ್ನು ಹೊಗಳಿದರು. ಸೆಟ್‌ನಲ್ಲಿ ಹೀರೋ ಕೊಟ್ಟ ಸಲಹೆಗಳನ್ನು ಮೆಲುಕು ಹಾಕಿದರು. ಸಂಗೀತ ನಿರ್ದೇಶಕ ವೀರ್‌ಸಮರ್ಥ್, ಐದು ವಿವಿಧ ಹಾಡುಗಳನ್ನು ಕೊಟ್ಟಿದ್ದನ್ನು ಹೇಳಿಕೊಂಡರು. ಎಲ್ಲಾ ಹಾಡುಗಳನ್ನೂ ಚೆನ್ನಾಗಿಯೇ ಸೆರೆಹಿಡಿಯಲಾಗಿದೆ ಎಂದರು ಅವರು. ಚಿತ್ರದಲ್ಲಿ ನಟಿಸಿರುವ “ಮಜಾ ಟಾಕೀಸ್’ ಖ್ಯಾತಿಯ ಪವನ್‌ಕುಮಾರ್, ಡ್ಯಾನಿ ಕುಟ್ಟಪ್ಪ, ನಿರಂಜನ್ ದಾವಣಗೆರೆ ಪಾತ್ರದ ಕುರಿತು ಹೇಳಿಕೊಂಡರು. ಛಾಯಾಗ್ರಾಹಕ ಕೆ.ಎಚ್. ಚಿದಾನಂದ್ ಚಿತ್ರದ ಸೊಬಗನ್ನು ಹೊಗಳಿದರು.