Advertisement

ಕೃತಿಗಳನ್ನೇ ಸಿನಿಮಾ ಮಾಡಿಸುತ್ತಿದ್ದ ರಾಜ್‌

11:32 AM May 21, 2017 | |

ಬೆಂಗಳೂರು: ಅಕ್ಷರಸ್ಥರು ಮತ್ತು ಅನಕ್ಷರಸ್ಥರನ್ನು ಸುಲಭವಾಗಿ ತಲುಪಲು ದೃಶ್ಯ ಮಾಧ್ಯಮ ಹೆಚ್ಚು ಸಹಕಾರಿಯಾಗಿದೆ ಎಂದು ಚಲನಚಿತ್ರ ಹಿರಿಯ ನಿರ್ದೇಶಕ ಎಸ್‌.ಕೆ.ಭಗವಾನ್‌ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

Advertisement

“ಸಾಹಿತ್ಯ, ಅಕ್ಷರ ಅಕ್ಷರಸ್ಥರನ್ನು ಮಾತ್ರ ತಲುಪುತ್ತದೆ. ಅನಕ್ಷರಸ್ಥರಿಗೂ ಕೂಡ ಅರ್ಥವಾಗುವಂತೆ ಸರಳವಾಗಿ ತಲುಪಿಸುವ ಮಾಧ್ಯಮವೇ ದೃಶ್ಯ ಮಾಧ್ಯಮ. ಆದ್ದರಿಂದ ಡಾ.ರಾಜ್‌ಕುಮಾರ್‌ ಅವರು ಕನ್ನಡದ ಅತ್ಯುತ್ತಮ ಕೃತಿಗಳನ್ನು ಚಲನಚಿತ್ರ ಮಾಡುವಂತೆ ನನ್ನನ್ನು ಪ್ರೇರೇಪಿಸಿದ್ದರು.

ಆದ್ದರಿಂದ “ಧರ್ಮದೇವತೆ’ ಎಂಬ ಕಾದಂಬರಿ ಆಧಾರಿತ “ಕರುಣೆಯೇ ಕುಟುಂಬದ ಕಣ್ಣು’ ಎಂಬ ಚಲನ ಚಿತ್ರ ಮೂಡಿಬರಲು ಸಾಧ್ಯವಾಯಿತು. ಆ ನಂತರ ಅನೇಕ ಕಾದಂಬರಿ ಆಧಾರಿತ ಚಲನಚಿತ್ರಗಳಲ್ಲಿ ರಾಜ್‌ಕುಮಾರ್‌, ಜಯಂತಿ ಹಾಗೂ ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ,’ ಎಂದು ಸ್ಮರಿಸಿದರು.

“ನಿರ್ದೇಶಕನ ಭಾವನೆ, ಕಲ್ಪನೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕಿದ್ದರೆ ಕಲಾವಿದರು ಮುಖ್ಯ. ಆದ್ದರಿಂದ ಅವರನ್ನು ಗೌರವಿಸಬೇಕು. ರಾಜ್‌ಕುಮಾರ್‌ ಕನ್ನಡದ ಮೇರು ನಟ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಸರಳ ವ್ಯಕ್ತಿತ್ವ, ಸಮಯಪ್ರಜ್ಞೆ, ಅರ್ಪಣಾಭಾವದಿಂದ ದೊಡ್ಡಮಟ್ಟಕ್ಕೆ ಬೆಳೆದರು,’ ಎಂದ ಭಗವಾನ್‌, ಅವರೊಂದಿಗೆ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.

ಪ್ರಶಸ್ತಿ ಪ್ರದಾನ ಮಾಡಿದ ಚಲನಚಿತ್ರ ಹಿರಿಯ ನಟಿ ಜಯಂತಿ, ಹಿಂದೆ ಸಿನಿಮಾ ಸೆಟ್‌ಗಳು ಒಂದು ಕುಟುಂಬದಂತಿದ್ದವು. ನಿರ್ದೇಶಕ ಕುಟುಂಬದ ಯಜಮಾನ. ಇಂದಿನ ಪರಿಸ್ಥಿತಿ ಬೇರೆಯೇ ಇದೆ. ತಿಪ್ಪರಲಾಗ ಹಾಕಿದರೂ, ಅಂದಿನ ಗೋಲ್ಡನ್‌ ಡೇಸ್‌ ಮತ್ತೆ ಬರಲು ಸಾಧ್ಯವಿಲ್ಲ. ಭಗವಾನ್‌ ಮತ್ತು ರಾಜ್‌ಕುಮಾರ್‌ ಅಣ್ಣತಮ್ಮಂದಿರಂತೆ ಇದ್ದರು.

Advertisement

ಅವರ ಒಡನಾಟ, ಸಲುಗೆಯಿಂದ ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್‌ಹಿಟ್‌ ಸಿನಿಮಾಗಳು ಹೊರಬರುವಂತಾದವು. ಅವರಿಗೆ ಡಾ.ರಾಜ್‌ಕುಮಾರ್‌ ಸಂಸ್ಕೃತಿ ಪ್ರಶಸ್ತಿ ಸಿಕ್ಕಿರುವುದು ಸೂಕ್ತವಾಗಿದೆ,’ ಎಂದು ಶ್ಲಾ ಸಿದರು. ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಎಸ್‌.ಎ.ಚಿನ್ನೇಗೌಡ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್‌ ಉಪಸ್ಥಿತರಿದ್ದರು. 

ಸಿನಿಮಾಕ್ಕೆ ಬರುವ ಉದ್ದೇಶವೇ ಇರಲಿಲ್ಲ 
“ನನಗೆ ಸಿನಿಮಾಕ್ಕೆ ಬರುವ ಆಸೆಯೇ ಇರಲಿಲ್ಲ. ನೃತ್ಯ ಕಲಿಯಬೇಕೆಂದು ಮದ್ರಾಸಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಭಗವಾನ್‌ ಅವರು, ನಮ್ಮ ಮನೆಗೆ  ಬಂದು “ಚಂದವಳ್ಳಿಯ ತೋಟ’ ಸಿನಿಮಾದಲ್ಲಿ ಅಭಿನಯಿಸಲು ಕೇಳಿಕೊಂಡರು. ಆದರೆ, ನನ್ನನ್ನು ಸಿನಿಮಾಗೆ ಕಳುಹಿಸಲು ಕುಟುಂಬದವರು ಒಪ್ಪಲಿಲ್ಲ.

ಬಳಿಕ ಅವರೆಲ್ಲರನ್ನು ಒಪ್ಪಿಸುವುದರಲ್ಲಿ ಭಗವಾನ್‌ ಯಶಸ್ವಿಯಾದರು. ಅವರೊಂದಿಗೆ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ರಾಜ್‌ ಹಾಗೂ ನನ್ನ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಭಗವಾನ್‌ ನಮ್ಮ ಗುರು ಇದ್ದಂತೆ” ಎಂದು ಹಿರಿಯ ನಟಿ ಜಯಂತಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next