ಮುಂಬೈ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್) ಮುಖಂಡರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Arrested: ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ; ಜೇಡ್ರಳ್ಳಿ ಕೃಷ್ಣಪ್ಪ ಸೇರಿ ಇಬ್ಬರ ಬಂಧನ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸ್ಥಾನ ಹಂಚಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಎಂಎನ್ ಎಸ್ ಮುಖಂಡರುಗಳಾದ ಬಾಳಾ ನಂದಗಾಂವ್ಕರ್, ಸಂದೀಪ್ ದೇಶಪಾಂಡೆ ಮತ್ತು ನಿತಿನ್ ಸರ್ದೆಸಾಯಿ ಅವರನ್ನು ರಾಜ್ ಠಾಕ್ರೆ ಫಡ್ನವೀಸ್ ಅವರ ನಿವಾಸಕ್ಕೆ ಕಳುಹಿಸಿರುವುದಾಗಿ ಮೂಲಗಳು ಹೇಳಿವೆ.
ವರದಿಯ ಪ್ರಕಾರ, ಚುನಾವಣೆಯಲ್ಲಿನ ಸೀಟು ಹಂಚಿಕೆ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಮಹಾರಾಷ್ಟ್ರದಲ್ಲಿ ಈ ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರು ಎರಡು ಬಾರಿ ಮತ ಚಲಾಯಿಸುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿದ್ದು, 48 ಲೋಕಸಭಾ ಸ್ಥಾನಗಳಿವೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ ಏಕನಾಥ್ ಶಿಂಧೆಯ ಶಿವಸೇನಾ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ.