ಮಂಗಳೂರು: ವೈಭವ್ ಫ್ಲಿಕ್ಸ್ ಅವರು ಮ್ಯಾಂಗೋ ಪಿಕ್ಕಲ್ ಎಂಟರ್ ಟೈನ್ಮೆಂಟ್ ಸಹಯೋಗದೊಂದಿಗೆ ನಿರ್ಮಾಣವಾಗಿದ್ದ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ ತೆರೆಕಂಡು ಒಂದು ತಿಂಗಳ ನಂತರವೂ ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ.
ಚಿತ್ರ ಬಿಡುಗಡೆಯಾದ ದಿನದಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾ ಮೇ 20ರಂದು ಬಿಡುಗಡೆಯಾಗಿತ್ತು. ಜೂನ್ 13ರಂದು 25ನೇ ದಿನದ ಯಶಸ್ವಿ ಪ್ರದರ್ಶನದೊಂದಿಗೆ ಹಲವು ಚಿತ್ರಮಂದಿರಗಳಲ್ಲಿ ಒಂದು ತಿಂಗಳನ್ನು ಪೂರೈಸಿದೆ.
ದುಬೈನಲ್ಲೂ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್, ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲಿಸ್, ಉಡುಪಿ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳದಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರದ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ತುಂಬಾ ಖುಷಿಕೊಟ್ಟಿದೆ ಎಂದು ಚಿತ್ರದ ನಿರ್ಮಾಪಕ ಆನಂದ ಎನ್ ಕುಂಪಲ ಮತ್ತು ನಿರ್ದೇಶಕ ರಾಹುಲ್ ಅಮೀನ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಈಗಾಗಲೇ ಶೇ.80ರಷ್ಟು ಗಳಿಕೆ ಕಂಡಿದ್ದು, ಮುಂದೆ ಶೇ. ನೂರರಷ್ಟು ಗಳಿಕೆ ಕಾಣುವ ವಿಶ್ವಾಸ ಇರುವುದಾಗಿ ತಿಳಿಸಿದ್ದಾರೆ.
ಅದ್ದೂರಿ ಮೇಕಿಂಗ್ ನೊಂದಿಗೆ ಚಿತ್ರ ನಿರ್ಮಾಣಗೊಂಡಿದ್ದು, ಸಿನಿಮಾದ ಹಾಡುಗಳು ಕರಾವಳಿ ಸೇರಿದಂತೆ ವಿದೇಶದಲ್ಲೂ ಮೆಚ್ಚುಗೆ ಪಡೆದುಕೊಂಡಿದೆ. ಕೌಟುಂಬಿಕ ಮನರಂಜನೆಯ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಹೆಚ್ಚು ಹಿಡಿದಿಟ್ಟಿದೆ. ಈ ಚಿತ್ರವನ್ನು ರಾಹುಲ್ ಅಮೀನ್ ನಿರ್ದೇಶಿಸಿದ್ದು, ಆನಂದ್ ಕುಂಪಲ ನಿರ್ಮಾಪಕರಾಗಿದ್ದಾರೆ. ವಿನೀತ್ ಕುಮಾರ್ ಕಥೆ ಬರೆದಿದ್ದು, ರಾಹುಲ್ ಮತ್ತು ವಿನೀತ್ ಚಿತ್ರಕಥೆ ಬರೆದಿದ್ದಾರೆ.
ಗಿರಿಗಿಟ್ ಚಿತ್ರ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ, ರಾಷ್ಟ್ರ ಪ್ರಶಸ್ತಿ ವಿಜೇತ ಪಡ್ಡಾಯಿ ಚಿತ್ರ ಖ್ಯಾತಿಯ ಕ್ಯಾಮೆರಾಮೆನ್ ವಿಷ್ಣುಪ್ರಸಾದ್ ಚಿತ್ರೀಕರಣ, ಸೃಜನ್ ಕುಮಾರ್ ತೋನ್ಸೆ ಸಂಗೀತ ನಿರ್ದೇಶಕ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ.
ರಾಜ್ ಆ್ಯಂಡ್ ಸೌಂಡ್ಸ್ ಸಿನಿಮಾದ ನಾಯಕರಾಗಿ ವಿನೀತ್, ನಾಯಕಿಯಾಗಿ ಯಶ ಶಿವಕುಮಾರ್ ಹಾಗೂ ಕರಿಷ್ಮಾ ಅಮೀನ್ ನಟಿಸಿದ್ದಾರೆ. ಇನ್ನುಳಿದಂತೆ ಹಾಸ್ಯ ದಿಗ್ಗಜರಾದ ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು ಮತ್ತು ಸತೀಶ್ ಬಂದಲೆ, ಸಂದೀಪ್ ಶೆಟ್ಟಿ, ಮರ್ವಿನ್, ಪ್ರಸನ್ನ ಶೆಟ್ಟಿ ಬೈಲೂರು, ರವಿ ರಾಮಕುಂಜ, ಉಮೇಶ್ ಮಿಜಾರ್, ಚೈತ್ರ ಶೆಟ್ಟಿ ತಾರಾಗಣದಲ್ಲಿದ್ದಾರೆ.
ಸುಹಾನ್ ಪ್ರಸಾದ್, ಪವನ್ ಕುಮಾರ್, ಬಿ.ಅಶೋಕ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗ, ಸೀತಾರಾಮ ಶೆಟ್ಟಿ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.