Advertisement

ರಾಜ್‌ ನನ್ನಲ್ಲೂ ಬದುಕಿದ್ದಾರೆ.ಇದೇ ರೀತಿ ಎಷ್ಟು ಜನರೊಳಗಿದ್ದಾರೋ 

11:48 AM Apr 21, 2018 | |

 ಆ ಮನೆಗೆ ದೊಡ್ಡ ಕಾಂಪೌಂಡ್‌. ಅದಕ್ಕೊಂಡು ಗೇಟು. ತೆರೆದು ಒಳಗೆ ಹೋದರೆ ಯಾರೂ ಕಾಣಲಿಲ್ಲ. ಮನೆ ಮುಂದಿನ ಲಾನ್‌ ಮೇಲೆ ತಲೆಗೆ ಟುವಲ್‌ ಕಟ್ಟಿಕೊಂಡು, ಪಂಚೆ ದಾರಿಯೊಬ್ಬರು ನೀರು ಹಾಯಿಸುತ್ತಿದ್ದರು. 
“ಅಣ್ಣಾವ್ರು ಇದ್ದಾರೇನಪ್ಪಾ ‘ ಹೀಗೆ ಕೇಳಬೇಕು ಅಂತ ವಾಕ್ಯಗಳು ತಲೆಯಿಂದ ಹೊರಟು ನಾಲಿಗೆ ಮೇಲೆ ಕೂತಿತ್ತು, ಅದಕ್ಕೆ ಗಂಟಲಿನಿಂದ ದನಿ ಕೊಡಬೇಕು ಎನ್ನುವಷ್ಟರಲ್ಲಿ  “ಓಹೋ. ಬನ್ನಿ ಗುರು’ ಅಂದರು ನೀರು ಹಾಯಿಸುತ್ತಿದ್ದ ವ್ಯಕ್ತಿ. 
ಶಾಕ್‌. 
ಏಕೆಂದರೆ ಆ ದನಿ ರಾಜಕುಮಾರರದ್ದೇ. 
“ಅಣ್ಣಾ, ನೀವು ‘ ಆಶ್ಚರ್ಯದದಿಂದ ಉದ್ಗರಿಸಿದಾಗ..

Advertisement

“ಬನ್ನಿ, ಬನ್ನಿ’ ಅಂತ ರೂಮಿಗೆ ಕರೆದು ಕೊಂಡು ಹೋಗಿ ಕೂಡ್ರಿಸಿದರು. 
ಅದುವರೆಗೂ ನನಗೆ ರಾಜ್‌ಕುಮಾರ್‌ ಅಂದರೆ ಹೀಗಿರ್ತಾರೆ, ಹೀಗೀಗೆ ಬದುಕುತ್ತಾರೆ. ದೊಡ್ಡ ಸ್ಟಾರ್‌, ಭಾರೀ ಶ್ರೀಮಂತರು ಬೇರೆ… ಹೀಗೆ  ಏನೇನೇನೋ ಕಲ್ಪನೆಗಳಿದ್ದವು.  ಆದರೆ ಅವರು ತಲೆಗೆ ಟವಲ್‌ ಕಟ್ಟಿದ್ದ ರೀತಿ, ಅವರ ವರ್ತನೆ ನೋಡಿ ಎಲ್ಲವೂ ಕಳಚಿ ಬಿದ್ದವು.

ಆವತ್ತು ನನ್ನ ತಲೆಯಲ್ಲಿ ಹಿಂದಿ ಪ್ಯಾಟ್ರನ್‌ ಹಾಡು ಒಂದಿತ್ತು. ಅದು  ಹಿಂದಿ ಚಿತ್ರಕ್ಕಾಗಿಯೇ ಮಾಡಿದ್ದು.  ಅಣ್ಣಾವ್ರು ಬಂದವರೇ ಚಿಕ್ಕ ಮಗುವಂತೆ ಎದುರಿಗೆ ಕೂತರು.  ನನ್ನ ಮನಸ್ಸು ಆ ಹಾಡನ್ನು ಗುನುಗುತ್ತಲೇ ಇತ್ತು. ಸುಮ್ಮನೆ ಅವರ ಮುಂದೆ ಹಿಂದಿಯಲ್ಲೇ ಆ ಹಾಡನ್ನು ಹಾಡಿದೆ. ಕೂತಿದ್ದವರು ಎದ್ದು  “ಚೆನ್ನಾಗಿದೆ, ಚೆನ್ನಾಗಿದೆ. ಇದನ್ನೇ ಇಟ್ಟುಕೊಳ್ಳೋಣ’ ಅಂದುಬಿಟ್ಟರು. “ಅಣ್ಣಾ , ಇದು ಹಿಂದಿ ಪ್ಯಾಟ್ರನ್‌ ಹಾಡು. ನಮ್ಮ ಟ್ರೆಂಡ್‌ಗೆ ಹೋದುತ್ತಾ ಅಂದರೆ… “ಇಲ್ಲ, ಚೆನ್ನಾಗಿದೆ ಗುರು ಅವರೇ. ಇಟ್ಕೊಳೀ ‘ ಅಂತ ಹಾಡನ್ನು ಮತ್ತೂಮ್ಮೆ ಹೇಳಿಸಿ ಎಂಜಾಯ್‌ ಮಾಡಿದರು.  ಆಗ ಹುಟ್ಟಿದ್ದೇ ” ಎಲ್ಲಿಂದ ಆರಂಭವೋ…’ ಹಾಡು.

ರಾಜಕುಮಾರ್‌ ಅವರಿಗೆ ಆಗಿರುವ ಅನುಭವದಷ್ಟು ನನಗೆ ವಯಸ್ಸಾಗಿಲ್ಲ. ಇಂಡಸ್ಟ್ರೀಗೆ ಹೊಸಬ ಬೇರೆ. 
 ಬಹುಶಃ ಇವತ್ತು ಬೆಂಡ್‌ ಎತ್ತಬಹುದು ಅಂದು ಕೊಂಡಿದೇ ಅವರ ಮನೆಗೆ ಹೋಗಿದ್ದೆ. ಆದರೆ ಅವರು ನನ್ನ ಮುಂದೆ ಮಗುವಿನ ಥರ ಕೂತಿದ್ದು ನೋಡಿ ಆಶ್ಚರ್ಯವಾಯಿತು.  ಅವರು ಸಂಗೀತಕ್ಕೆ ಎಷ್ಟು ಗೌರವ ಕೊಡುತ್ತಿದ್ದರೋ, ಒಬ್ಬ ಸಂಗೀತ ನಿರ್ದೇಶಕನಿಗೂ ಅಷ್ಟೇ ಬೆಲೆ ಕೊಡುತ್ತಿದ್ದರು.   ಪ್ರತಿ ಸಲ ಟ್ಯೂನ್‌ ಕೇಳಿದಾಗಲು, ಚಿತ್ರದ ಸಂದರ್ಭ, ಪಾತ್ರ ಏನು ಡಿಮ್ಯಾಂಡ್‌ ಮಾಡುತ್ತಿದೆ ಅಂತ ನೋಡೋರು. ಸಂದರ್ಭದ ಹಿಂದೆ ಮುಂದೆ ಏನು ಬಂದು ಹೋಗುತ್ತದೆ ಅನ್ನೋದನ್ನು ಗಮನಿಸೋರು.  ಆಮೇಲೆ ಟ್ಯೂನ್‌ ಕೇಳಿ “ಗುರು ಅವರೇ, ಸ್ವಲ್ಪ ಸಾಫ್ಟ್ ಆಗಿದ್ದರೆ ಚೆನ್ನಾಗಿರುತ್ತೆ ಅನಿಸುತ್ತಿದೆ. ನೀವು ಒಂದು ಸಲ ನೋಡಿ’ ಅನ್ನೋರು. ಯಾವತ್ತೂ ಕೂಡ ಇದೇ ಚೆನ್ನಾಗಿದೆ, ಹೀಗೇ ಬರಬೇಕು ಅಂತ ತಮ್ಮ ಸ್ಟಾರ್‌ಗಿರಿಯನ್ನು ಪ್ರಭಾವಿಸಿ ಹೇಳಿದವರಲ್ಲ. 

ಯಾರಿಗೇ ಆಗಲಿ, ಒಂದು ಪೊಜಿಷನ್‌, ಹೆಸರು ಎಲ್ಲಾ ಬಂದ ಮೇಲೆ ನಾವು ಎಲ್ಲಾ ಮಾಡಿದ್ದೇವೆ ಅನ್ನೋ ಒಂದು ಉದಾಸೀನ ಬಂದು ಬಿಡುತ್ತದೆ.  ತಮ್ಮ ಅನುಭವವನ್ನು ಜೀವನಪರ್ಯಂತ ಮೆಲುಕು ಹಾಕುತ್ತಲೇ ಇರುತ್ತಾರೆ.   
ಇಂಥವರಿಗೆ ಹಾಡು ಕೊಟ್ಟರೆ “ಏನು ಮಹಾ, ಇಂಥ ಹಾಡುಗಳನ್ನು ಎಷ್ಟು ಹಾಡಿಲ್ಲ’ ಅನ್ನೋ ರೀತಿ ನೋಡುತ್ತಾರೆ. ಆಕಾಲದಲ್ಲಿ ನಾನು ಹೀಗೆ ಮಾಡಿದ್ದೆ, ಹಾಗೆ ಮಾಡಿದ್ದೆ ಅಂತ ಭೂತಕಾಲದ ಸಾಧನೆಯನ್ನು ಹೆಕ್ಕಿ ಹೆಕ್ಕಿ ಹೇಳುತ್ತಿರುತ್ತಾರೆ. ಆದರೆ ರಾಜುRಮಾರ್‌ ಮಾತ್ರ ಯಾವತ್ತೂ ಹೀಗೆ ನಡೆದುಕೊಳ್ಳಲೇ ಇಲ್ಲ.  ಪ್ರತಿಸಲ ಎದುರಿಗೆ ಕೂತಾಗಲೂ 
ತಾವು ಈ ಕ್ಷೇತ್ರಕ್ಕೆ ಹೊಸಬರೇನೋ ಅನ್ನೋ ರೀತಿ ನಡೆದುಕೊಳ್ಳುವುದನ್ನು ನೋಡಿ ಆಶ್ಚರ್ಯವಾಯಿತು. 

Advertisement

ನನಗೆ ಎಷ್ಟೋ ಸಲ ಅನಿಸಿದ್ದಿದೆ. ಜನ  ಏಕೆ ಇವರನ್ನು ಇಷ್ಟೊಂದು ಇಷ್ಟ ಪಡುತ್ತಾರೆ ಅಂತ? ಅವರನ್ನು ಎರಡು ಸಲ ಭೇಟಿ ಮಾಡಿದರೆ ಸಾಕು. ಪ್ರತಿಯೊಬ್ಬರೂ ಅವರ ಪ್ರೀತಿಯ ಬಲೆಗೆ ಬೀಳುತ್ತಾರೆ. ಕಾರಣ ಅವರಲ್ಲಿದ್ದ ನಿಷ್ಕಪಟ ನಯ, ವಿನಯ.  ಒಬ್ಬ ನಿರ್ದೇಶಕನಿಗೆ ಕೊಡುತ್ತಿದ್ದ ಗೌರವವನ್ನೇ ಲೈಟ್‌ ಬಾಯ್‌ಗೂ ಕೊಡೋರು. ಅವರ ಮನೆ ಹೊಕ್ಕರೆ ಮುಗೀತು. ಎಲ್ಲರೂ ಒಂದೇ. ರಾಜಕುಮಾರರೇ ಸ್ವತಃ ಊಟ ಬಡಿಸೋರು. ಒಂದು ಪಕ್ಷ ರಿಹರ್ಸಲ್‌ ಮಧ್ಯೆ ಬೇಗ ಹೋಗಬೇಕಾಗಿ ಬಂದರೆ ” ದಯಮಾಡಿ, ಊಟ ಮಾಡಿಕೊಂಡು ಹೋಗಿ ‘ ಅನ್ನೋರು. ಗೇಟ್‌ ತನಕ ಬಂದು ಬಿಟ್ಟು ಬರೋರು.  ನಾನು ಜನರ ಜೊತೆ ಹೇಗಿರಬೇಕು, ಪ್ರೀತಿ ಹೇಗೆ ಗಳಿಸಬೇಕು ಅನ್ನೋದನ್ನು ಇವರಿಂದಲೇ ಕಲಿತದ್ದು. ರಾಜುRಮಾರ್‌ ಯಾರೇ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡೋರು, ಗಮನ ಕೊಟ್ಟು ಕೇಳ್ಳೋರು.  ಚಿಕ್ಕೋರು, ದೊಡ್ಡೋರು ಅನ್ನೋ ಬೇಧ ಭಾವವಿರಲಿಲ್ಲ. 

 ನಾನು ಬಾಂಬೆಯಲ್ಲಿ ಸ್ಟಾರ್‌ಗಳನ್ನು ನೋಡಿದ್ದೀನಿ. ಪರದೆಯ ಮೇಲೆ ಮಾತ್ರವಲ್ಲ. ಬದುಕಲ್ಲೂ ಹೀರೋ ಥರ  ಆಡೋರು. ಎದುರಿಗೆ ಕುಳಿತರೆ ಕಾಲುಗಳನ್ನು ಅಲ್ಲಾಡಿಸುತ್ತಾ ಸ್ಟೈಲ್‌ ಮಾಡೋರು.  ಆದರೆ ಅಣ್ಣಾವ್ರ ಮುಂದೆ ಹೀಗೆಲ್ಲಾ ಮಾಡಕ್ಕೆ ಆಗ್ತಿರಲಿಲ್ಲ. ಒಂದು ಪಕ್ಷ ಮಾಡಿದರೂ “ರಾಜುಕುಮಾರರೇ ಹಾಗಿರಬೇಕಾದರೆ ನಿಂದೇನಯ್ನಾ’ ಅಂತ ಜನ ಬಯ್ಯೋರು.  ನಿಜ ಹೇಳಬೇಕಂದರೆ, ನಮ್ಮ ಸಿನಿಮಾ ಇಂಡಸ್ಟ್ರೀಗೆ ಸೌಜನ್ಯ ಕಲಿಸಿದವರು ರಾಜ್‌ಕುಮಾರ್‌ ಅವರೇ. 

ಆರಂಭದಲ್ಲಿ ನನಗೂ ಆ್ಯಟ್ಯಿಟ್ಯೂಡ್‌ ಪ್ರಾಬ್ಲಿಂ ಇತ್ತು. ಅವರ ಸಂಗದಿಂದ ಬಿಟ್ಟು ಹೋಯಿತು. 
ಹೀಗೆ, ಇವತ್ತಿಗೂ ರಾಜಕುಮಾರ್‌ ನನ್ನಲ್ಲೂ ಬದುಕಿದ್ದಾರೆ. ಇದೇ ರೀತಿ ಇನ್ನು ಎಷ್ಟು ಜನರೊಳಗಿದ್ದಾರೋ ಏನೋ..!?

ಗುರುಕಿರಣ್‌, ಸಂಗೀತ ನಿರ್ದೇಶಕ

 ನಿರೂಪಣೆ: ಕೆ.ಜಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next