Advertisement

ಕನ್ನಡಪರ ಹೋರಾಟಕ್ಕೆ ಗಟ್ಟಿತನ ನೀಡಿದ ಗಂಡುಗಲಿ

10:04 AM Apr 26, 2019 | Lakshmi GovindaRaju |

ದೇವನಹಳ್ಳಿ: ಕನ್ನಡ ನಾಡು-ನುಡಿ, ನೆಲ, ಜಲಕ್ಕೆ ಸಂಬಂಧಿಸಿದಂತೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜ್‌ಕುಮಾರ್‌ ಗೋಕಾಕ್‌ ಚಳವಳಿ ಸೇರಿದಂತೆ ಎಲ್ಲಾ ಕನ್ನಡಪರ ಹೋರಾಟಗಳಿಗೆ ಗಟ್ಟಿತನ ತಂದುಕೊಟ್ಟ ಗಂಡುಗಲಿ ಎಂದು ಬೂದಿಗೆರೆ ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ್‌ಗೌಡ ಹೇಳಿದರು.

Advertisement

ತಾಲೂಕಿನ ಬೂದಿಗೆರೆ ಗ್ರಾಮ ಪಂಚಾಯತ್‌ ಆವರಣದಲ್ಲಿ ರಾಜ್‌ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಕೇಕ್‌ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಲೆ ಮೈಗೂಡಿಸಿಕೊಳ್ಳೋಣ: ಕನ್ನಡದ ಕುವರ, ಡಾ.ರಾಜಣ್ಣ ಅವರು ಸರಳತೆ, ಸಹೃದಯತೆಯಿಂದ ಎಲ್ಲರಲ್ಲೂ ಒಂದಾಗಿ ವಿಶ್ವಮಾನವತೆಯನ್ನು ಮೆರೆದಂತಹ ಕನ್ನಡದ ಧೀಮಂತ ವರನಟರು. ಎಲ್ಲರೂ ಡಾ.ರಾಜ್‌ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ಕಲೆಯನ್ನು ಮೈಗೂಡಿಸಿಕೊಳ್ಳೋಣ ಎಂದು ತಿಳಿಸಿದರು.

ರಾಜ್‌ ಆದರ್ಶ ಪಾಲಿಸಿ: ರಾಜ್‌ಕುಮಾರ್‌ ಅವರು ಕೇವಲ ನಟರಾಗಿ ಮಾತ್ರವಲ್ಲದೇ ಆದರ್ಶಪ್ರಾಯ ವ್ಯಕ್ತಿಯಾಗಿ, ಕನ್ನಡದ ಹೋರಾಟಗಾರನಾಗಿ, ಸಾಮಾಜಿಕ ಬದಲಾವಣೆಯ ಹರಿಕಾರರಾಗಿಯೂ ಗುರುತಿಸಿಕೊಂಡಿದ್ದರು. ಅಂತಹ ವ್ಯಕ್ತಿಯ ಆದರ್ಶಗಳನ್ನು ಈಗಿನ ಎಲ್ಲಾ ಯುವ ನಟರು ಪಾಲಿಸಬೇಕು.

ಡಾ.ರಾಜ್‌ಕುಮಾರ್‌ ಹೃದಯ ಶ್ರೀಮಂತಿಕೆಯ ಸರಳ, ಸಜ್ಜನಿಕೆಯುಳ್ಳವರಾಗಿದ್ದರು. ವಿಶ್ವಮಾನವ ಏಕತಾ ದಿನಾಚರಣೆಯಂದೇ ರಾಜಣ್ಣ ಅವರು ಜನಿಸಿದ್ದು ಇಡೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ, ತಮ್ಮ ಅಭಿನಯದ ಪರಿಪಕ್ವತೆಯಿಂದ ಇಡೀ ರಾಷ್ಟ್ರದಲ್ಲೇ ಮನೆಮಾತಾದ ಧೀಮಂತರು.

Advertisement

ದಾದಾಸಾಹೇಬ್‌ ಫಾಲ್ಕೆ ಪುರಸ್ಕೃತರಾದ ಡಾ. ರಾಜ್‌ಕುಮಾರ್‌ ಜನ್ಮದಿನಾಚರಣೆಯನ್ನು ಎಲ್ಲರೂ ಒಟ್ಟಿಗೆ ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು. ಡಾ.ರಾಜ್‌ಕುಮಾರ್‌ ಅಭಿಮಾನಿ ಶಿವಕುಮಾರ್‌ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಡಾ.ರಾಜಣ್ಣನವರು ಅಭಿನಯಿಸದ ಪಾತ್ರಗಳೇಯಿಲ್ಲ.

ಗಾಯನದಲ್ಲೂ ರಾಷ್ಟ್ರ ಪ್ರಶಸ್ತಿ ಗಳಿಸಿ, ಸಿನಿಮಾ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಸೈ ಎನಿಸಿಕೊಂಡ ಏಕೈಕ ಅಪರೂಪದ ಮಾಣಿಕ್ಯ ಡಾ.ರಾಜ್‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ಖಾದಿ ಬೋರ್ಡ್‌ ಅಧ್ಯಕ್ಷ ಲಕ್ಷ್ಮಣ್‌ಮೂರ್ತಿ, ಮುಖಂಡರಾದ ರಾಮಣ್ಣ, ರಾಮಚಂದ್ರಪ್ಪ (ತೇರು), ಕಿರಣ್‌, ಬೂದಿಗೆರೆ ಗ್ರಾಮದ ಮುಖಂಡರಾದ ಮುನಿರಾಜು, ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next