ನವದೆಹಲಿ: ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ 961 ವಾರ್ಡ್ ಗಳಲ್ಲಿ, ಬಿಜೆಪಿ 737 ವಾರ್ಡ ಗಳಲ್ಲಿ ಜಯಗಳಿಸಿದೆ ಎಂದು ವರದಿ ತಿಳಿಸಿದೆ.
ಕಳೆದ ವಾರ ರಾಜಸ್ಥಾನದ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆದಿತ್ತು. ಮಂಗಳವಾರ ಪ್ರಕಟವಾಗಿರುವ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಪಕ್ಷ 49 ನಗರಸಭೆಗಳಲ್ಲಿ ಪ್ರಾಬಲ್ಯ ಮೆರೆದಿದೆ ಎಂದು ವರದಿ ಹೇಳಿದೆ.
ಕಳೆದ ಡಿಸೆಂಬರ್ ನಲ್ಲಿ ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದ ನಂತರ ನಡೆದ ಮೊದಲ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 2105 ವಾರ್ಡ್ ಗಳಲ್ಲಿ ಸರಾಸರಿ ಒಂದು ಸಾವಿರಕ್ಕೂ ಅಧಿಕ ವಾರ್ಡ್ ಗಳಲ್ಲಿ ಜಯ ಸಾಧಿಸಿದೆ ಎಂದು ವರದಿ ವಿವರಿಸಿದೆ.
ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ಸಂತೋಷ ಇದೆ ಎಂಬುದು ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದ ಮೂಲಕ ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಸ್ಥಾನದ 33 ಜಿಲ್ಲೆಗಳ 49 ಸ್ಥಳೀಯ ಸಂಸ್ಥೆಗಳಿಗೆ ಶನಿವಾರ ಚುನಾವಣೆ ನಡೆದಿತ್ತು. ಇದರಲ್ಲಿ ಮೂರು ಪುರಸಭೆ, 18 ನಗರ ಸಭೆ ಹಾಗೂ ನಗರ ಪಾಲಿಕೆ ಸೇರಿದೆ.