ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ ಮಲಯಾಳಂ ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲಿಯೂ ಅವರಿಗೆ ವಿಶೇಷ ಅಭಿಮಾನಿ ಬಳಗವಿದೆ.
“ಟರ್ಬೋ’ ಸಿನಿಮಾ ಮೂಲಕ ಮಲಯಾಳಂನಲ್ಲೂ ತಮ್ಮ ಪ್ರತಿಭೆ ತೋರಿದ ಶೆಟ್ಟರು, ಈಗ “ರುಧಿರಂ’ ಎಂಬ ಮತ್ತೊಂದು ಮಲಯಾಳಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂಬುದು ಟೀಸರ್ ಮೂಲಕ ತಿಳಿದು ಬರುತ್ತದೆ. ಚಿತ್ರದಲ್ಲಿ ನಟಿ ಅಪರ್ಣಾ ಬಾಲಮುರಳಿ ಸಹ ನಟಿಸಿದ್ದಾರೆ.
ಜಿಶೋ ಲೋನ್ ಆ್ಯಂಟನಿ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿ.ಎಸ್. ಲಾಲನ್ ಹಣ ಹೂಡಿದ್ದಾರೆ. ಸಿನಿಮಾ ಡಿಸೆಂಬರ್ 13ರಂದು ತೆರೆ ಕಾಣುತ್ತಿದೆ. ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ರಾಜ್ ಬಿ. ಶೆಟ್ಟಿ.
ಇದರ ಜೊತೆಗೆ ಅನುರಾಗ್ ಕಶ್ಯಪ್ ನಿರ್ದೇಶನದ ಹಿಂದಿ ಚಿತ್ರವೊಂದರಲ್ಲೂ ನಟಿಸುತ್ತಿದ್ದಾರೆ. ಅದರ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಕನ್ನಡದ ನಟನೊಬ್ಬ ಹೀಗೆ ಬಹುಭಾಷೆ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.