ಸಾಗರ: ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕು ಮತ್ತು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಗುರುವಾರ ರೈತ ಸಂಘ ಗಣಪತಿಯಪ್ಪ ಬಣದ ಆಶ್ರಯದಲ್ಲಿ ನಾಡಕಲಸಿ, ಬೆಳಂದೂರು, ಮೈಲಾರಿಕೊಪ್ಪ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ರೈತರು ಮತ್ತು ಗ್ರಾಮಸ್ಥರು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಪಾದಯಾತ್ರೆ ಮತ್ತು ಟ್ಯಾಕ್ಟರ್ ರ‍್ಯಾಲಿ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸರ್ಕಾರ ಮತ್ತು ಮೆಸ್ಕಾಂ ನೀತಿಯ ವಿರುದ್ಧ ದಿಕ್ಕಾರದ ಘೋಷಣೆ ಮೊಳಗಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಶಿರವಾಳ, ರೈತರು ವಿದ್ಯುತ್ ಸಮಸ್ಯೆಯಿಂದ ತಮ್ಮ ಫಸಲು ಕಳೆದುಕೊಳ್ಳುತ್ತಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಅನೇಕ ಬಾರಿ ಶಾಸಕರಿಗೆ, ಮೆಸ್ಕಾಂಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ರೈತರು ತಾಳ್ಮೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದು, ಇದಕ್ಕೆ ಮೆಸ್ಕಾಂ ನೇರ ಹೊಣೆಯಾಗಿದೆ. ತಕ್ಷಣ ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ಹೋದಲ್ಲಿ ಶಿವಮೊಗ್ಗ ಮೆಸ್ಕಾಂ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸುವುದು ಅನಿವಾರ್ಯವಾಗುತ್ತದೆ. ರೈತರಿಗೆ ಗುಣಮಟ್ಟದ ವಿದ್ಯುತ್ ಕೊಡುವವರೆಗೂ ಬಿಲ್ ಪಾವತಿ ಮಾಡದೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಸರ್ಕಾರ ಮತ್ತು ಮೆಸ್ಕಾಂ ಸತ್ತು ಹೋಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಶಾಸಕರಿಗೆ, ಮೆಸ್ಕಾಂ ಅಧಿಕಾರಿಗಳಿಗೆ ಇಲ್ಲವಾಗಿದೆ. ನಾಡಿಗೆ ವಿದ್ಯುತ್ ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಸಾಗರ ಮತ್ತು ಹೊಸನಗರ ತಾಲೂಕಿಗೆ ದಿನದ 24 ಗಂಟೆ ಸಮರ್ಪಕ ವಿದ್ಯುತ್ ನೀಡಿ ಮೆಸ್ಕಾಂ ಋಣ ತೀರಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿತ್ತು. ಶಾಸಕರು ಬೇರೆಬೇರೆ ಕಡೆ ಹೋಗಿ ಧರಣಿ ಕುಳಿತುಕೊಳ್ಳುವ ಬದಲು ರೈತರ ಪರವಾಗಿ ಬಂದು ನಮ್ಮ ಜೊತೆ ಮೆಸ್ಕಾಂ ಎದುರು ಪ್ರತಿಭಟನೆ ನಡೆಸಲಿ. ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ರೈತರಿಗೆ ಈತನಕ ನ್ಯಾಯ ಸಿಕ್ಕಿಲ್ಲ. ಮಾರ್ಚ್ 7 ರಂದು ಮುಳುಗಡೆ ರೈತರು ಸಂಸದರ ಮನೆ ಎದುರು ಘೆರಾವ್ ಹಾಕುವ ಚಳುವಳಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಹೊಸ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಕಂಗೊಳಿಸುತ್ತಿದೆ ಕಂಠೀರವ ಕ್ರೀಡಾಂಗಣ; ಸಚಿವರಿಂದ ಪರಿಶೀಲನೆ
ರೈತ ಸಂಘದ ತಾಲೂಕು ಸಂಚಾಲಕ ರಮೇಶ್ ಈ. ಕೆಳದಿ ಮಾತನಾಡಿ, ಕಳಪೆ ವಿದ್ಯುತ್ ಪೂರೈಕೆಯಿಂದ ರೈತರು ಫಸಲು ಕಳೆದುಕೊಂಡು ತೀವ್ರ ಆತಂಕದಲ್ಲಿದ್ದಾರೆ. ಪ್ರತಿ ರೈತರಿಗೆ 350 ವೋಲ್ಟ್ ವಿದ್ಯುತ್ ನೀಡಬೇಕು. ಆದರೆ ಮೆಸ್ಕಾಂ ಕೇವಲ 150 ವೋಲ್ಟ್ ವಿದ್ಯುತ್ ನೀಡುತ್ತಿದೆ. ಇದರಿಂದ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡಿ ಫಸಲಿಗೆ ನೀರು ಬಿಡಲು ಆಗುತ್ತಿಲ್ಲ. ರೈತರನ್ನು ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದರು.
ರೈತ ಸಂಘದ ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ಸೂರಜ್, ಕಿರಣ್, ಗ್ರಾಮಸ್ಥರಾದ ದೇವರಾಜ್, ಜಗದೀಶ್ ಬೆಳಂದೂರು, ಹಕ್ಕಿ ಕೆರೆಯಪ್ಪ, ಕೋಮಲಪ್ಪ, ಸತೀಶ್, ಶಿವು, ಸುಭಾಷ್, ವೀರಪ್ಪ, ದ್ಯಾವಪ್ಪ, ಅಜ್ಜಪ್ಪ, ರಾಮ್ ಸಾಗರ್, ಕಿರಣ್ ದೊಡ್ಮನೆ ಇನ್ನಿತರರು ಹಾಜರಿದ್ದರು.