Advertisement

ಆಲಮಟ್ಟಿ ಜಲಾಶಯ ಎತ್ತರಿಸಿ: ಸಿದ್ದು

04:31 PM Apr 23, 2022 | Team Udayavani |

ಬಾಗಲಕೋಟೆ: ಆಲಮಟ್ಟಿ ಜಲಾಶಯವನ್ನು ಎತ್ತರಿಸಿ ನಮಗೆ ದೊರೆಯುವ ಹೆಚ್ಚುವರಿ ನೀರು ಬಳಕೆಗೆ ನ್ಯಾಯಾಧೀಕರಣ ಅನುಮತಿ ನೀಡಿದೆ. ಆದರೆ, 12 ವರ್ಷದಿಂದ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಕೂಡಲೇ ಅಧಿಸೂಚನೆ ಹೊರಡಿಸುವಂತೆ ಒತ್ತಾಯ ಮಾಡುವ ಜತೆಗೆ ನಮಗೆ ದೊರೆತ ನೀರು ಬಳಕೆಗೆ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.

Advertisement

ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಕೆರೂರ ಏತ ನೀರಾವರಿ ಯೋಜನೆಯ ಭೂಮಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮ್ಮಿಶ್ರ ಸರಕಾರ ಇದ್ದಾಗ ಮಂಜೂರಾಗಿದ್ದ ಈ ಯೋಜನೆಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ಪಡೆಯುವುದು ಕೊರೊನಾದಿಂದ ವಿಳಂಬವಾಯಿತು. ಆ ಸಮಯ ಕೂಡಿ ಬಂದಿದೆ. ನೆಲ, ಜಲ, ಭಾಷೆ ಹಾಗೂ ಗಡಿಗಳ ಬಗ್ಗೆ ವಿಚಾರ ಬಂದಾಗ ಯಾವುದೇ ರಾಜಕಾರಣ ಬಯಲಿಗಿಟ್ಟು ಅಭಿವೃದ್ದಿಯತ್ತ ಗಮನ ಕೊಡಬೇಕು ಎಂದರು.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ 519 ರಿಂದ 524 ಮೀಟರ್‌ ಎತ್ತರಗೊಳಿಸಿದಾಗ ಈ ಭಾಗಕ್ಕೆ ಹೆಚ್ಚಿನ ನೀರಾವರಿ ಸಾಧ್ಯವಾಗುತ್ತದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಜಲಾಶಯ ಎತ್ತರ ಹಾಗೂ ಸಂತ್ರಸ್ಥರಿಗೆ ಪುನರ್‌ ವಸತಿ ಕಲ್ಪಿಸುವ ಬಗ್ಗೆ ಅಧೀಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು. ಕೆರೂರ ಏತ ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋದ ಸೋಮನಕೊಪ್ಪ, ಕಾನಾಪುರ, ಹಂಸನೂರ ಹಾಗೂ ತೆಗ್ಗಿ ಗ್ರಾಮ ಸೇರಿಸಬೇಕು. ಈ ಭಾಗದಲ್ಲಿರುವ ಎಲ್ಲ ಕೆರೆ ತುಂಬುವ ಕಾರ್ಯವಾಗಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆ ಕೂಗು ಈಗ ಸಾಕಾರಗೊಳ್ಳುತ್ತಿದೆ. ಇದಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಉತ್ತರ ಕರ್ನಾಟಕದ ಮಗ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದರಿಂದ ನಮ್ಮ ಭಾಗಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ಪ್ರಸಕ್ತ ಬಜೆಟ್‌ನಲ್ಲಿ ನವಲಿಗೆ 1 ಸಾವಿರ, ಮಹದಾಯಿಗೆ 1 ಸಾವಿರ ಹಾಗೂ ಯುಕೆಪಿಗೆ 5 ಸಾವಿರ ಅನುದಾನ ನೀಡಿದ್ದಾರೆ ಎಂದು ಹೇಳಿದರು.

Advertisement

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ನೀರಾವರಿಯಾದರೆ ಕೈಗಾರಿಕೆಗಳು ಬೆಳೆದು ರೈತರ ಸಂಕಷ್ಟ ಹಾಗೂ ನಿರುದ್ಯೋಗ ಸಮಸ್ಯೆಗೆ ಕೊನೆಯಾಗಲಿದೆ. ಬಾದಾಮಿ ಪ್ರವಾಸಿ ಕೇಂದ್ರವಾಗಿದ್ದರಿಂದ ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಬಾಗಲಕೋಟೆಯ ಕುಡಚಿ ರೈಲು ಮಾರ್ಗ ಕಾರಣಾಂತರಗಳಿಂದ ಕೇವಲ 33 ಕಿ.ಮೀಗೆ ಕುಂಟಿತಗೊಂಡಿದ್ದು, ಭೂಸ್ವಾಧೀನಕ್ಕೆ ಮುಖ್ಯಮಂತ್ರಿಗಳು 30 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಹನಮಂತ ನಿರಾಣಿ, ಪ್ರಕಾಶ ರಾಠೊಡ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶಸಿಂಗ್‌, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌. ಶಿವಕುಮಾರ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನಿಯರ್‌ ಎಚ್‌.ಸುರೇಶ, ಪ್ರಮುಖರಾದ ಹೊಳಬಸು ಶೆಟ್ಟರ, ಮೊಮ್ಮಟಗೇರಿ ಗ್ರಾಪಂ ಅಧ್ಯಕ್ಷ ಪುಂಡಲೀಕ ಘಟ್ನೂರ, ಕೆರೂರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.

ಗದೆ-ಕತ್ತಿ ಮನೆಯಲ್ಲಿ ಇರಬಾರದು: ಕೆರೂರ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಭಾಗದ ರೈತರು ಬೆಳ್ಳಿಯ ಗದೆ ಹಾಗೂ ಕಂಬಳಿ ನೀಡಿ ಸನ್ಮಾನಿಸಿದರು. ಈ ವೇಳೆ ಸಿಎಂ ಬೊಮ್ಮಾಯಿ ಅವರು ತಮ್ಮ ಭಾಷಣದ ವೇಳೆ ಗದೆ ಮತ್ತು ಕತ್ತಿ ಮನೆಯಲ್ಲಿ ಇರಬಾರದು. ಅವು ಒಂದಂಕ್ಕೊಂದು ಜಗಳಾಡುತ್ತವೆ. ನಾನು ಎಲ್ಲೇ ಸನ್ಮಾನಗೊಂಡರೂ ಗದೆ ಮತ್ತು ಕತ್ತಿ ಮನೆಗೆ ತಗೆದುಕೊಂಡು ಹೋಗಲ್ಲ. ಇಂದು ನೀಡಿದ ಗದೆಯನ್ನು ಕೆರೂರಿನ ಹನಮಂತ ದೇವರ ಗುಡಿಗೆ ನೀಡುವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next