ಕುಷ್ಟಗಿ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಕೊಪ್ಪಳ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಜಿಲ್ಲಾ ಸರ್ವೇಕ್ಷಣ ಅಧಿ ಕಾರಿಗಳ ಕಾರ್ಯಾಲಯ, ಕಂದಾಯ ಇಲಾಖೆ, ತಾಲೂಕು ಅರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮನ್ವ ಸಮಿತಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು ಮಾತನಾಡಿ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ತಾಲೂಕಿನಲ್ಲಿ ತಂಬಾಕು ನಿಯಂತ್ರಣ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲ ಸರಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಪ್ರದೇಶ ಎಂದು ಪ್ರಮಾಣೀಕರಿಸಲು ಅನುಸರಿಸಬೇಕಾದ ಕ್ರಮ ಹಾಗೂ ಜನರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕು ಎಂದರು.
ಗ್ರಾಮ ಪಂಚಾತಿಗಳಲ್ಲಿ ತಂಬಾಕು ನಿಯಂತ್ರಣ ಸಮಿತಿ ರೂಪಿಸಿದ 2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪಟ್ಟಣ ಪಂಚಾಯತ್, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಉದ್ದಿಮೆ ಪರವಾನಗಿ ನೀಡುವಾಗ ತಂಬಾಕು ನಿಯಂತ್ರಣ ಕಾಯ್ದೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು.
ಎಲ್ಲ ಶಾಲಾ-ಕಾಲೇಜುಗಳನ್ನು ತಂಬಾಕು ಮುಕ್ತ ಪ್ರದೇಶಗಳೆಂದು ಘೋಷಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಬೆಳಗ್ಗೆಯ ಪ್ರಾರ್ಥನೆಯ ವೇಳೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು. ಅಲ್ಲದೇ ದುಶ್ಚಟಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಂಬಾಕು ಕೋಶದ ಜಿಲ್ಲಾ ಸಲಹೆಗಾರ ಮೆಹಬೂಬ್ ಅಲಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇ-ಸಿಗರೇಟ್ ಉತ್ಪಾದನೆ, ಆಮದು, ರಫ್ತು, ಸಾಗಾಟ, ಮಾರಾಟ, ಸರಬರಾಜು, ಸಂಗ್ರಹ ಮತ್ತು ಜಾಹೀರಾತು ನಿಷೇಧ ಕಾಯ್ದೆಯನ್ನು 2019ರ ಸೆಪ್ಟೆಂಬರ್‌ನಿಂದ ಜಾರಿಗೆ ತಂದಿದೆ. ಇದರನ್ವಯ ಇ-ಸಿಗರೇಟ್ ಮಾರಾಟ ಮಾಡಿದಲ್ಲಿ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ. ವರೆಗೆ ದಂಡ ಅಥವಾ ಈ ಎರಡನ್ನು ವಿಧಿ ಸುವ ಅವಕಾಶ ಇರುತ್ತದೆ ಎಂದರು.
ಕಾಯ್ದೆಯನ್ನು ಎರಡನೇ ಬಾರಿ ಉಲ್ಲಂಘಿಸಿದರೆ 3 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ವರೆಗೆ ದಂಡ ವಿ ಧಿಸಲು ಅವಕಾಶವಿದೆ. ಕಾಯ್ದೆಯ ಸೆಕ್ಷನ್ 5ರ ಅನುಸಾರ ಈ-ಸಿಗರೇಟ್‌ಗಳ ಸಂಗ್ರಹ ಮಾಡಿದ ವ್ಯಕ್ತಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ರೂ. ವರೆಗೆ ದಂಡ ಅಥವಾ ಈ ಎರಡನ್ನು ವಿಧಿಸುವ ಅವಕಾಶ ಇರುತ್ತದೆ ಎಂದು ಸಭೆಗೆ ವಿವರಿಸಿದರು.
ಶಿರಸ್ತೇದಾರ ರಜನಿಕಾಂತ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್, ವಿ.ಬಿ. ದಾದ್ಮಿ, ಈರಪ್ಪ, ಮಹೆಬೂಬಅಲಿ, ಜ್ಯೋತಿ ಕಿತ್ತೂರ ಮತ್ತಿತರಿದ್ದರು.