ದೇವನಹಳ್ಳಿ : ಕಾನೂನು ಸೇವೆಗಳ ಬೃಹತ್ ಶಿಬಿರವನ್ನು ಜಿಲ್ಲೆಯಲ್ಲಿ ಏರ್ಪಡಿಸಿ ವಿವಿಧ ಇಲಾಖೆಗಳಿಂದ ನೀಡಲಾಗುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಮೂಲಕ ಅರಿವು ಮೂಡಿ ಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರಿಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಕಾನೂನು ಸೇವೆಗಳ ಬೃಹತ್ ಶಿಬಿರ ಆಯೋಜಿಸಲು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳಿಂದ ಲಭ್ಯವಿರುವ ಸೇವಾ ಸೌಲಭ್ಯದ ಯೋಜನಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಪವರ್‌ಪಾಯಿಂಟ್ ಪ್ರಸೆಂಟೇಷನ್ ಮತ್ತು ಇಲಾಖೆಯ ಆಶಯಗಳನ್ನು ತಿಳಿಸುವ ಕರಪತ್ರಗಳನ್ನು ಮುದ್ರಿಸಿ, ಆಯಾ ಇಲಾಖೆಗಳ ವತಿಯಿಂದ ಸ್ಟಾಲ್‌ಗಳನ್ನು ನಿರ್ಮಿಸಿ ಜನರಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಶಿಬಿರ ನಡೆಯುವ ದಿನಾಂಕ ಹಾಗೂ ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದರು. ಕಾನೂನು ಸೇವೆಗಳ ಪ್ರಾಧಿಕಾರದ ಬೃಹತ್ ಶಿಬಿರದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಮೊದಲಾದ ಇಲಾಖೆಗಳ ವತಿಯಿಂದ ಇರುವಂತಹ ಕಾರ್ಯಕ್ರಮಗಳು ಮತ್ತು ಯೋಜನೆಗಳು, ಹಿರಿಯ ನಾಗರಿಕರಿಗೆ ಮತ್ತು ನಿರಾಶ್ರಿತರಿಗೆ ಲಭ್ಯವಿರುವ ಪುನರ್ವಸತಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ವೃದ್ಯಾಪ್ಯ ಜೀವನದಲ್ಲಿ ಮಕ್ಕಳು ಸರಿಯಾಗಿ ನೋಡಿಕೊಳ್ಳದೇ, ಇದ್ದಲ್ಲಿ ಕಾನೂನಾತ್ಮಕವಾಗಿ ದಾವೆ(ದೂರು) ಸಲ್ಲಿಸುವುದರ ಬಗ್ಗೆ ಹಾಗೂ ಅಸಂ ಘಟಿತ ಕಾರ್ಮಿಕರಿಗೆ ಇರುವಂತಹ ಸೇವಾ ಕಾರ್ಯ ಕ್ರಮಗಳ ಬಗ್ಗೆ ಹೆಚ್ಚು ಒತ್ತು ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಗಮನ ಹರಿಸಿ, ವಿವಿಧ ಇಲಾಖೆಗಳು ಅರ್ಥಪೂರ್ಣವಾಗಿ ಕಾರ್ಯಕ್ರಮ ರೂಪಿಸಿ ಶಿಬಿರದ ಉದ್ದೇಶ ಮತ್ತು ಆಶಯಗಳನ್ನು ತಿಳಿಸಲು ಸಿದ್ಧರಾಗಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಕೆ. ಕರಿಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.