Advertisement
ಮಳೆ ಮತ್ತು ಗಾಳಿಯಿಂದ ಸಮುದ್ರ ಉಗ್ರಸ್ವರೂಪ ತಾಳಿದ್ದು ದೋಣಿಗಳಿಗೆ ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ. ಸದಾ ಮೀನುಗಾರಿಕೆ ಚಟುವಟಿಕೆ ಇಲ್ಲದೆ ಕರಾವಳಿಯ ಬಂದರುಗಳು ಬಿಕೋ ಎನ್ನುತ್ತಿದೆ. ಮೀನುಗಾರ ಕಾರ್ಮಿಕ ಮಹಿಳೆಯರು ಸೇರಿದಂತೆ ಎಲ್ಲರಿಗೂ ಬಂದರಿನಲ್ಲಿ ಕೆಲಸ ಇಲ್ಲದಂತಾಗಿದೆ.
ಉತ್ತಮ ಮೀನುಗಳು ದೊರೆತು ಒಂದಷ್ಟು ಲಾಭತರುವ ಈ ಸಮಯದಲ್ಲಿ ಹವಾಮಾನ ಕೈಕೊಟ್ಟಿರುವುದು ಮೀನುಗಾರ ರಲ್ಲಿ ನಿರಾಶೆ ತಂದಿದೆ. ಕರಾವಳಿಯ ಮೀನುಗಾರಿಕೆಯ ಉದ್ಯಮದ ಕೋಟ್ಯಂತರ ರೂ.ಸಂಪಾದನೆಗೆ ಆರಂಭದಲ್ಲೇ ಕುತ್ತು ಉಂಟಾಗಿದೆ. ಸಾಲ ಮಾಡಿ ಬೋಟ್‌ನ್ನು ಸಿದ್ದಗೊಳಿಸಿ, ಡೀಸೆಲ್, ಮಂಜುಗಡ್ಡೆ ತುಂಬಿಸಿ ಕಡಲಿಗಿಳಿದ ಮೀನುಗಾರರು ಮರಳಿ ಬಂದಿದ್ದು ಇವರಿಗೆ ಭಾರೀ ನಷ್ಟ ಉಂಟಾಗಿದೆ. ಕರಾವಳಿಯಾದ್ಯಂತ ಸಹಸ್ರಾರು ಮೀನುಗಾರಿಕೆ ಕುಟುಂಬಗಳು ಆರ್ಥಿಕ ಹೊಡೆತ ಎದುರಿಸುತ್ತಿವೆ. ಅಪಾರ ನಷ್ಟ
ಕಳೆದ ಮೂರ್‍ನಾಲ್ಕು ದಿನಗಳಿಂದ ಸಮುದ್ರದ ಅಲೆಯ ಹೊಡೆತಕ್ಕೆ ನಾಲ್ಕು ಮೀನುಗಾರಿಕೆ ಬೋಟ್‌ಗಳು ಈಗಾಗಲೇ ಮುಳುಗಡೆಗೊಂಡು ಕೋಟ್ಯಾಂತರ ನಷ್ಟ ಸಂಭವಿಸಿದೆ. ಬಹುತೇಕ ಬೋಟ್‌ಗಳ ಎಂಜಿನ್, ವಯರ್, ಬಲೆ ಇನ್ನಿತರ ಉಪಕರಣಗಳು ಹಾನಿಗೀಡಾಗಿವೆ ಸೋಮವಾರ ಸಮುದ್ರದ ಮಧ್ಯೆ ಎಂಜಿನ್ ಕೆಟ್ಟು ಎರಡು ಆಳಸಮುದ್ರ ದೋಣಿಗಳು ಅಪಾಯಕ್ಕೆಸಿಲುಕಿತ್ತು. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಬುಧವಾರ ಮುಂಜಾನೆ ಮಲ್ಪೆ ಬಂದರಿನ ಬೆಸಿನ್‌ನ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗಳ ಹಗ್ಗ ತುಂಡಾಗಿ ನೀರಿನ ಹರಿವಿಗೆ ಚಲಿಸಲಾರಂಭಿಸಿತ್ತು. ಈ ಸಂದರ್ಭ ಒಂದಕ್ಕೊಂದು ಬೋಟ್ ಢಿಕ್ಕಿ ಹೊಡೆದು ಹಾನಿಗೊಂಡಿವೆ.
Related Articles
ಗಾಳಿ ಮತ್ತು ಸಮುದ್ರ ಸಹಜ ಸ್ಥಿತಿಗೆ ಬರುವವರೆಗೆ ಮೀನುಗಾರರು ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಮಲ್ಪೆ ಮೀನುಗಾರ ಸಂಘದಲ್ಲಿಯೂ ಕೂಡ ಮೈಕ್ ಮೂಲಕ ಘೋಷಣೆಯನ್ನು ಮಾಡುವಂತೆ ತಿಳಿಸಲಾಗಿದೆ.
– ಪಾರ್ಶ್ವನಾಥ್
ಮೀನುಗಾರಿಕೆ ಉಪ ನಿರ್ದೇಶಕರು, ಉಡುಪಿ
Advertisement
ಬೋಟ್ ಸಂಚಾರ ಅಸಾಧ್ಯಬಿರುಸುಗೊಂಡಿದ್ದ ಸಮುದ್ರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.ತೀರ ಪ್ರದೇಶದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಬಂದರಿನ
ಅಳಿವೆ ಬಾಗಿಲಿನಲ್ಲಿ ಬೋಟ್ ಸಂಚಾರ ಅಸಾಧ್ಯವಾಗಿದೆ. ಜಿಲ್ಲಾಧಿಕಾರಿಗಳು ಆ.18ರವರೆಗೆ ಯಾವುದೇ ಬೋಟ್‌ಗಳು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದ್ದಾರೆ.
– ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ ನಾಲ್ಕು ದಿನಗಳಿಂದ ಮೀನುಗಾರಿಕೆ ಸ್ಥಗಿತ
ಕರಾವಳಿಯಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಲಾಂಬರ್ (ದೊಡ್ಡ ಅಲೆಗಳ ಅಪ್ಪಳಿಸುವಿಕೆ) ಬರುವುದರಿಂದ ದೋಣಿಯನ್ನು ನಿಯಂತ್ರಣಕ್ಕೆ ತರಲಾಗುವುದಿಲ್ಲ ಮತ್ತು ಬಲೆಯನ್ನು ನೀರಿಗಿಳಿಸಲು ಸಾಧ್ಯವಾಗುತ್ತಿಲ್ಲವಾದುದರಿಂದ ದಡ ಸೇರಿದ್ದೇವೆ. 4 ದಿನಗಳಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
– ಪಾಂಡುರಂಗ ಭಟ್ಕಳ , ಬೋಟಿನ ತಂಡೇಲ