Advertisement

ಮಳೆಗಾಲದ ತಿನಿಸುಗಳು

10:04 PM Aug 01, 2019 | mahesh |

ಈಗ ಮಳೆಗಾಲ. ಆಷಾಢ ಮಾಸ ಬೇರೆ. ಮಳೆಗಾಲದಲ್ಲಿ ಜಾಸ್ತಿ ಬೆಳೆಯುವ ಕೆಸುವಿನೆಲೆ, ಚಗತೆ ಸೊಪ್ಪು ಒಂದೆಲಗ, ನುಗ್ಗೆಸೊಪ್ಪು, ಅರಸಿನ ಎಲೆ, ಅಲ್ಲದೆ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ, ಮಾವಿನಕಾಯಿ ಮೊದಲಾದವನ್ನು ಬಳಸಿ ಮನೆಯಲ್ಲೇ ಸ್ವಾದಿಷ್ಟ ಹಾಗೂ ಆರೋಗ್ಯಯುತ ತಿನಿಸುಗಳನ್ನು ತಯಾರಿಸಬಹುದು.

Advertisement

ಹಲಸಿನ ಉಪ್ಪಿನ ಸೊಳೆ ಪಲ್ಯ
ಬೇಕಾಗುವ ಸಾಮಗ್ರಿ: ಉಪ್ಪಿನಲ್ಲಿ ಹಾಕಿದ ಹಲಸಿನ ಸೊಳೆಗಳು- 2 ಕಪ್‌, ತೆಂಗಿನಕಾಯಿ ತುರಿ-1 ಕಪ್‌, ಒಣಮೆಣಸು 3-4, ಕೊತ್ತಂಬರಿ- 1/2 ಚಮಚ, ಜೀರಿಗೆ-1/4 ಚಮಚ, ಅರಸಿನ ಪುಡಿ, ಬೆಳ್ಳುಳ್ಳಿ- 2 ಬೀಜ, ನೀರುಳ್ಳಿ- 1, ಒಗ್ಗರಣೆಗೆ: ಸಾಸಿವೆ, ಕರಿಬೇವಿನಸೊಪ್ಪು , ಎಣ್ಣೆ.

ತಯಾರಿಸುವ ವಿಧಾನ: ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆಗಳನ್ನು ಐದಾರು ಗಂಟೆ ಮೊದಲೇ ನೀರಿನಲ್ಲಿ ಹಾಕಿಡಿ. ನಂತರ ಚೆನ್ನಾಗಿ ತೊಳೆದು ಹಿಂಡಿ ಸಣ್ಣಗೆ ತುಂಡು ಮಾಡಿ. ಒಣಮೆಣಸು, ಕೊತ್ತಂಬರಿ, ಜೀರಿಗೆಯನ್ನು ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದುಕೊಂಡು ತೆಂಗಿನ ತುರಿ ಮತ್ತು ಬೆಳ್ಳುಳ್ಳಿ ಬೀಜ ಸೇರಿಸಿ ಗರಿಗರಿಯಾಗಿ ರುಬ್ಬಿರಿ. ನಂತರ ಬಾಣಲೆಗೆ ಎಣ್ಣೆಹಾಕಿ ಸಾಸಿವೆ ಕರಿಬೇವು ಸೇರಿಸಿ ಒಗ್ಗರಣೆ ತಯಾರಿಸಿ ಅದಕ್ಕೆ ಹೆಚ್ಚಿಟ್ಟ ಹಲಸಿನ ತೊಳೆ, ನೀರುಳ್ಳಿ ಚೂರುಗಳು, ಅರಸಿನ ಪುಡಿ ಸೇರಿಸಿ ಬೇಯಿಸಿ. ರುಬ್ಬಿಟ್ಟ ಮಸಾಲೆ ಸೇರಿಸಿ ಒಂದು ಕುದಿ ಕುದಿಸಿದರೆ ರುಚಿಕರ ಪಲ್ಯ ತಯಾರು. ಇದು ಕುಚ್ಚಲಕ್ಕಿ ಅನ್ನದೊಂದಿಗೆ ಸವಿಯಲು ರುಚಿಕರ.

ಚಗಟೆ ಸೊಪ್ಪು – ಹಲಸಿನ ಬೀಜದ ಸುಕ್ಕ
ಬೇಕಾಗುವ ಸಾಮಗ್ರಿ: ಚಗಟೆ ಸೊಪ್ಪು ಸಣ್ಣಗೆ ಹೆಚ್ಚಿದ್ದು- 2 ಕಪ್‌ ಕಪ್‌, ಹಲಸಿನ ಬೀಜ 10-12, ಒಣಮೆಣಸು 4-5, ಕೊತ್ತಂಬರಿ- 1 ಚಮಚ, ಜೀರಿಗೆ- 1/4 ಚಮಚ, ತೆಂಗಿನ ತುರಿ- 1 ಕಪ್‌, ಹುಳಿ, ರುಚಿಗೆ ತಕ್ಕಷ್ಟು ಉಪ್ಪು , ಒಗ್ಗರಣೆಗೆ ಸಾಸಿವೆ, ಬೆಳ್ಳುಳ್ಳಿ ಎಸಳು, ಎಣ್ಣೆ .

ತಯಾರಿಸುವ ವಿಧಾನ: ಮೊದಲು ಒಣಮೆಣಸು, ಕೊತ್ತಂಬರಿ, ಜೀರಿಗೆಯನ್ನು ಎಣ್ಣೆಯಲ್ಲಿ ಹುರಿದು ಪುಡಿ ತಯಾರಿಸಿಕೊಳ್ಳಿ. ಚಗತೆ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಡಿ. ಹಲಸಿನ ಬೀಜವನ್ನು ಜಜ್ಜಿ ಸಿಪ್ಪೆ ತೆಗೆದು ತೊಳೆದು ನೀರು ಸೇರಿಸಿ ಬೇಯಿಸಿರಿ. ಬೇಯುವಾಗ ಉಪ್ಪು ಹಾಕಿ. ಬೀಜ ಬೆಂದ ನಂತರ ಹೆಚ್ಚಿಟ್ಟ ಸೊಪ್ಪು ಮತ್ತು ಹುಳಿನೀರು ಸೇರಿಸಿ ಬೇಯಿಸಿ. ನೀರು ಆರುತ್ತಾ ಬರುವಾಗ ಮಾಡಿಟ್ಟ ಮಸಾಲೆಯ ಪುಡಿ ಹಾಗೂ ತೆಂಗಿನ ತುರಿಯನ್ನು ಸೇರಿಸಿ ಕೊನೆಗೆ ಸಾಸಿವೆ-ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಇದೇ ರೀತಿ ನುಗ್ಗೆಸೊಪ್ಪಿನ ಪಲ್ಯವನ್ನೂ ತಯಾರಿಸಬಹುದು.

Advertisement

ಉಪ್ಪಿನ ಮಾವಿನಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಉಪ್ಪಿನಲ್ಲಿ ಹಾಕಿದ ಮಾವಿನಕಾಯಿ- 1, ತೆಂಗಿನತುರಿ- 1 ಕಪ್‌, ಹಸಿಮೆಣಸು – 2, ಸಾಸಿವೆ- 1/2 ಚಮಚ, ಸಿಹಿ ಮಜ್ಜಿ ಗೆ- 1/2 ಕಪ್‌, ಒಗ್ಗರಣೆಗೆ ಇಂಗು, ಸಾಸಿವೆ, ಕರಿಬೇವು, ಎಣ್ಣೆ .

ತಯಾರಿಸುವ ವಿಧಾನ: ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ತುಂಡುಮಾಡಿ ತೆಂಗಿನತುರಿ, ಹಸಿಮೆಣಸು, ಸಾಸಿವೆ ಸೇರಿಸಿ ರುಬ್ಬಿರಿ. ನಂತರ ಇದಕ್ಕೆ ಮಜ್ಜಿ ಗೆ ಸೇರಿಸಿ. ಕೊನೆಗೆ ಬೇಕಿದ್ದರೆ ಉಪ್ಪು ಹಾಕಿ ಸಾಸಿವೆ-ಕರಿಬೇವು-ಇಂಗು ಸೇರಿಸಿ ಒಗ್ಗರಣೆ ಕೊಡಿ. ಮಳೆಬರುವಾಗ ಬಿಸಿಬಿಸಿ ಅನ್ನದೊಂದಿಗೆ ಊಟಕ್ಕೆ ರುಚಿಕರವಾಗಿರುತ್ತದೆ.

ಅರಸಿನ ಎಲೆಯ ಕಡುಬು
ಬೇಕಾಗುವ ಸಾಮಗ್ರಿ: ಅರಸಿನ ಎಲೆಗಳು- 10-12, ಬೆಳ್ತಿಗೆ ಅಕ್ಕಿ- 2 ಕಪ್‌, ತೆಂಗಿನಕಾಯಿ ತುರಿ- 2 ಕಪ್‌, ಬೆಲ್ಲ – 1 ಕಪ್‌, ಪರಿಮಳಕ್ಕೆ ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಒಂದೆರಡು ಗಂಟೆ ನೆನೆಸಿ ತೊಳೆದು ನೀರು ಬಸಿದು ತೆಂಗಿನಕಾಯಿ, ಉಪ್ಪು ಹಾಕಿ ನಯವಾಗಿ ರುಬ್ಬಿ ಗಟ್ಟಿಯಾಗಿ ಹಿಟ್ಟು ತಯಾರಿಸಿ. ನಂತರ ಒಂದು ಬಾಣಲೆಗೆ ಬೆಲ್ಲವನ್ನು ಸ್ವಲ್ಪ ನೀರು ಹಾಕಿ ಕುದಿಸಿ. ಪಾಕವಾದಾಗ ತೆಂಗಿನ ತುರಿ, ಏಲಕ್ಕಿಯ ಪುಡಿಯನ್ನು ಹಾಕಿ ಮಿಶ್ರಣ ತಯಾರಿಸಿ. ಅರಸಿನ ಎಲೆಯನ್ನು ಶುಚಿಗೊಳಿಸಿ ಅದರ ಮೇಲೆ ಹಿಟ್ಟನ್ನು ತೆಳುವಾಗಿ ಹಚ್ಚಿ ಮಧ್ಯದಲ್ಲಿ ಬೆಲ್ಲ-ಕಾಯಿತುರಿಯ ಮಿಶ್ರಣ ಹರಡಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಬೇಯಿಸಿದರೆ ಅರಸಿನೆಲೆಯ ಸುವಾಸನಭರಿತ ಕಡುಬು ತಯಾರು.

ಕೆಸುವಿನೆಲೆ ಪತ್ರೊಡೆ
ಬೇಕಾಗುವ ಸಾಮಗ್ರಿ: ಕೆಸುವಿನೆಲೆ- 15, ಬೆಳ್ತಿಗೆ ಅಕ್ಕಿ- 2 ಕಪ್‌, ಹೆಸರು- 1/2 ಕಪ್‌, ತೆಂಗಿನ ತುರಿ- 2 ಕಪ್‌, ಒಣಮೆಣಸು 5-6, ಕೊತ್ತಂಬರಿ ಬೀಜ- 1 ಚಮಚ, ಚಿಟಿಕೆ ಅರಸಿನ, ಲಿಂಬೆಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿ ಮತ್ತು ಹೆಸರನ್ನು ಒಂದೆರಡು ಗಂಟೆ ನೆನೆಸಿ ನಂತರ ನೀರು ಬಸಿದು ತೆಂಗಿನ ತುರಿ, ಕೊತ್ತಂಬರಿಬೀಜ, ಹುಳಿ, ಚಿಟಿಕೆ ಅರಸಿನ, ಉಪ್ಪು , ಬೇಕಷ್ಟು ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿರಿ. ಈ ಮಿಶ್ರಣವನ್ನು ಕೆಸುವಿನ ಎಲೆಗೆ ಸವರಿ ಸುರುಳಿ ಮಾಡಿ ಹಬೆಯಲ್ಲಿ ಬೇಯಿಸಿ. ತಣ್ಣಗಾದ ಮೇಲೆ ತುಂಡು ಮಾಡಿ ಕಾವಲಿಯಲ್ಲಿಟ್ಟು ಎಣ್ಣೆ ಹಾಕಿ ಕಾಯಿಸಬಹುದು. ಇಲ್ಲವೆ ಸಣ್ಣಗೆ ಹೆಚ್ಚಿ ಒಗ್ಗರಣೆ ಮಾಡಿ ಬೆಲ್ಲ, ತೆಂಗಿನ ತುರಿ ಸೇರಿಸಿದರೆ ರುಚಿ ರುಚಿಯಾಗಿರುತ್ತದೆ.

ಎಸ್‌.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next