Advertisement

ಪ್ರಥಮ ವರ್ಷಧಾರೆಯ ಅನುಭವ

09:29 AM Jun 06, 2021 | Team Udayavani |

ವರ್ಷದ ಪ್ರಥಮ ವರ್ಷಧಾರೆ ತರುವ ಸಂಭ್ರಮವೇ ಅಂಥದ್ದು. ಸಕಲ ಜೀವರಾಶಿಗೂ ಮೊದಲ ಮಳೆಯೆಂದರೆ ಇನ್ನಿಲ್ಲದ ಸಂತೋಷ.

Advertisement

ಭೂಮಿಯ ಮೇಲೆ ಎಲ್ಲವೂ ಮಳೆಯ ಮೇಲೆಯೇ ನಿಂತಿದೆ. ವರ್ಷದ ಮೊದಲ ಮಳೆಯೋ ಎಲ್ಲರಲ್ಲೂ ಹತ್ತು ಹಲವು ಹೊಸ ಭರವಸೆಗಳನ್ನು  ತರಿಸುತ್ತದೆ. ಮೊದಲು ಸುರಿದ ಮಳೆಯು ರೈತನ ಕಣ್ಣಲ್ಲೊಂದು ಖುಷಿ ತರಿಸುತ್ತದೆ. ಪಕ್ಷಿಗಳಿಗೆ ಇನ್ನಿಲ್ಲದ ಸಂತಸವನ್ನು ನೀಡುತ್ತದೆ. ಮಳೆಯೊಂದು ವಿಸ್ಮಯವೇ ಸರಿ. ಮೊದಲ ಮಳೆ ಸುರಿದಾಗ ಮನೆಯ ಮಣ್ಣ ಪರಿಮಳದ ಮಾತು. ತೊಯ್ದು ತೊಟ್ಟಿಕ್ಕುತ್ತ ತೂಗುವ ಬೇಸಗೆಯ ಚಪ್ಪರದಲ್ಲಿ ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ ಅಂತ ಮಳೆಯನ್ನು  ಹೊಗಳಿ ಬರಿದಿದ್ದಾರೆ  ಕಾಯ್ಕಿಣಿಯವರು. ಮೊದಲ ಮಳೆ ಬರಿ ನೆನಪುಗಳನ್ನಲ್ಲದೆ ಪ್ರತೀ ಬಾರಿ ಹೊಸ ಚೇತನವನ್ನು  ಪ್ರತೀ ಒಬ್ಬರಿಗೂ ತುಂಬುತ್ತಲೇ ಹೋಗುತ್ತದೆ. ಇದೇ ಮಳೆಯ ಹೆಗ್ಗಳಿಕೆ.

ಮಳೆಗಾಲ ಹುಟ್ಟುಹಾಕುವ ಜೀವ ಸೃಷ್ಟಿಯ ಸರಪಳಿಯು ಈ ಪ್ರಕೃತಿಯ ಒಂದು ಅದ್ಭುತ. ಮಳೆ ಬೀಳುವುದನ್ನೇ ಕಾಯುತ್ತಿದ್ದು, ನೆಲದ ಗರ್ಭದಲ್ಲಿ ಹುದುಗಿದ್ದ ಬೀಜಗಳೆಲ್ಲ ಮೊಳಕೆ ಒಡೆದು, ಎರಡು ಹಸುರು ಎಲೆಗಳನ್ನು ಹೊರಚಾಚಿ, “ನಾನು ಬಂದೆ, ಈ ಜಗತ್ತಿಗೆ’ ಎಂದು ಸಾರಿ ಹೇಳುವ ರೀತಿಯೇ ಒಂದು ರೋಮಾಂಚನವಾದದ್ದು. ಹಾಗೆಯೇ ನಮ್ಮ ಹಿರಿಯರು ಮಳೆಗೂ ಕೂಡ ಗಾದೆ ಕಟ್ಟಿದ್ದರು. ಆ ಗಾದೆಗಳಲ್ಲಿ ಮಳೆಯ ಲಕ್ಷಣದೊಂದಿಗೆ  ಜನರ ಬದುಕಿನ ಧ್ವನಿಯೂ ಇದೆ. “ಮಳೆಯೇ ಬೆಳೆಗೆ ಸಿಂಗಾರ’  ಅನ್ನುವ ಗಾದೆ ಮಳೆ ಗಾದೆಗಳ ಮುನ್ನುಡಿಯಾಗಿದೆ. ಇದರ ಜತೆಗೆ ಕೆಲವು ಕಡೆ ಮುಂಗಾರು ಮಳೆಯನ್ನು ದೊಡ್ಡ ಮಳೆಗಳೆಂದು, ಹಿಂಗಾರು ಮಳೆಯನ್ನು ಚಿಕ್ಕ ಮಳೆ ಎಂದು ಕರೆಯುವುದು ರೂಢಿಯಲ್ಲಿದೆ. ಏನೇ ಆಗಲಿ  ಮೊದಲ ಮಳೆ  ಎಂಬುದು  ಹೇಳಲಾಗದ ಅಪೂರ್ವ ಅನುಭವ.

 

ಯಶಸ್ವಿನಿ ಸುರೇಂದ್ರ ಗೌಡ ಕೊಟ್ಟಿಗೆಹಾರ,

Advertisement

ಜ್ಞಾನ ಜ್ಯೋತಿ ಟಿ ಎಂ ಎಸ್‌ ಫಸ್ಟ್‌ ಗ್ರೇಡ್‌ ಕಾಲೇಜು ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next