Advertisement

ಮಳೆಗಾಲ; ಹಳೆ ಮನೆಗೂ ಬೇಕು ಆರೈಕೆ

03:47 PM Jun 09, 2018 | |

ಮಳೆಗಾಲವೆಂದರೆ ಮನೆಗಳಿಗೂ ಆರೈಕೆಯ ಕಾಲ. ಸಿಡಿಲು, ಮಿಂಚು ಸಹಿತ ಗಾಳಿ, ಮಳೆಗೆ ಮನೆಯ ಛಾವಣಿ, ಗೋಡೆ ,
ವಿದ್ಯುತ್‌ ವ್ಯವಸ್ಥೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದನ್ನು ಎದುರಿಸಲು ಮನೆಯನ್ನು ಸಾಕಷ್ಟು ಮೊದಲೇ
ಸಿದ್ಧಪಡಿಸಿರಬೇಕು. ಆಧುನಿಕ ಮನೆಗಳಿಗೆ ಇದು ಎಷ್ಟು ಮುಖ್ಯವೋ ಹಳೆ ಮನೆಗಳಿಗೂ ಅಷ್ಟೇ ಅಗತ್ಯ. 

Advertisement

ರಣ ಬಿಸಿಲಿನ ಬೇಗೆಯಿಂದ ಕಂಗೆಟ್ಟವರಿಗೆ ಈಗಾಗಲೇ ಮಳೆರಾಯ ತನ್ನ ಕೃಪೆ ತೋರಿಸಿಯಾಗಿದೆ. ಮಳೆಗಾಲದಲ್ಲಿ ಮನೆಯ ನಿರ್ವಹಣೆ ಬಲು ಕಠಿನ. ಅದಕ್ಕೆ ಎಷ್ಟು ಪೂರ್ವ ಸಿದ್ದತೆ ಮಾಡಿಕೊಂಡರೂ ಸಾಲದು. ಹಳೆ ಕಾಲದ ಹೆಂಚಿನ ಮನೆಯಿದ್ದರಂತೂ ಸಮಸ್ಯೆ ತೀರಾ ಗಂಭೀರ. ಮಳೆಗಾಲಕ್ಕೆ ಪೂರ್ವದಲ್ಲೇ ಎಲ್ಲ ಸಿದ್ದತೆ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ಮನೆಯ ವಾತಾವರಣ ನರಕವಾಗಿ ಬಿಡುತ್ತದೆ.

ಪೂರ್ವ ಸಿದ್ಧತೆ
ಹೆಂಚಿನ ಮನೆ ಎನ್ನುವುದು ಮರ ಮಟ್ಟುಗಳಿಂದಲೇ ಕೂಡಿರುವುದು ಹೆಚ್ಚು. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ನಿರ್ವಹಣೆ. ನಿರ್ವಹಣೆ ಇಲ್ಲವಾದಲ್ಲಿ ಮನೆಯ ಸೌಂದರ್ಯ ಕೂಡ ಹಾಳಾಗುತ್ತದೆ. ಬಾಳಿಕೆ ಕೂಡ ಕಡಿಮೆಯಾಗುತ್ತದೆ.

ಒಡೆದ ಹೆಂಚು ಬದಲಾಯಿಸಿ
ಹಳೆಯ ಹೆಂಚಿನ ಮನೆಗಳಲ್ಲಿ ಪ್ರಮುಖವಾಗಿ ಮಾಡಬೇಕಾದ ಕಾರ್ಯವೆಂದರೆ ಒಡೆದ ಹೆಂಚುಗಳನ್ನು ಬದಲಾಯಿಸುವುದು. ಇಲ್ಲವಾದಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆ ಆರಂಭಗೊಳ್ಳುತ್ತದೆ. ಇದರಿಂದ ನೀರು ಹೀರಿ ಗೋಡೆಗಳು ದುರ್ಬಲಗೊಂಡು ಕುಸಿಯುವ ಅಪಾಯವಿರುತ್ತದೆ. ಅಲ್ಲದೆ ಮರಮಟ್ಟುಗಳಿಗೆ ಗೆದ್ದಲು ಹಿಡಿಯುವ ಅಪಾಯವಿರುತ್ತದೆ.

ಗೆದ್ದಲು ಹುಳುಗಳ ನಿರ್ವಹಣೆ
ಪ್ರತಿ ಎರಡು ವರ್ಷಕ್ಕೊಮ್ಮೆಯಾದರೂ ಮನೆಯ ಗೆದ್ದಲು ಹುಳುಗಳನ್ನು ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಮರಮಟ್ಟುಗಳು ಗೆದ್ದಲು ಹಿಡಿದು ನಿರ್ವಹಣೆ ದುಬಾರಿಯಾದಿತು. ಗೆದ್ದಲು ಹುಳುಗಳ ನಿರ್ವಹಣೆಗೆ ವೆಸ್ಟ್‌ ಆಯಿಲ್‌, ಮಾರುಕಟ್ಟೆಯಲ್ಲಿ ಸಿಗುವು ಗೆದ್ದಲು ನಿಯಂತ್ರಣ ಕೀಟ ನಾಶಕಗಳನ್ನು ಬಳಸಬಹುದು. ಗೇರು ಎಣ್ಣೆ ಅಥವಾ ಪಾಲೀಶ್‌ ಬಳಸುವುದರಿಂದ ಮರಗಳ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಕಡಿಮೆ ಖರ್ಚಿನಲ್ಲಿ ಇದರ ನಿರ್ವಹಣೆ ಸಾಧ್ಯ.

Advertisement

ವಿದ್ಯುತ್‌ ಅಪಾಯ; ಜಾಗ್ರತೆ ವಹಿಸಿ
ಮಳೆಗಾಲದ ಸಂದರ್ಭ ವಿದ್ಯುತ್‌ ಸಂಬಂಧಿತ ದೋಷಗಳ ಕುರಿತು ಜಾಗ್ರತೆ ವಹಿಸಬೇಕಾಗುತ್ತದೆ. ನಿಮ್ಮ ಮನೆಯ ಸುತ್ತಮುತ್ತಲಿನ ವಿದ್ಯುತ್‌ ತಂತಿಗಳು ದುರ್ಬಲಗೊಂಡಿರುವುದು ಅಥವಾ ಮರದ ಗೆಲ್ಲುಗಳು ತಾಗುತ್ತಿರುವುದು ಕಂಡುಬಂದಲ್ಲಿ ವಿದ್ಯುತ್‌ ಪ್ರಸರಣಾ ನಿಗಮಕ್ಕೆ ದೂರು ನೀಡಿ ದುರಸ್ತಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ಇದರಿಂದ ಶಾರ್ಟ್‌ಸರ್ಕ್ನೂಟ್‌ ಉಂಟಾಗಿ ನಿಮ್ಮ ಮನೆಯ ಉಪಕರಣಗಳು ಹಾಳಾಗುವ ಸಾಧ್ಯತೆಗಳಿವೆ. ಮನೆಯ ವಿದ್ಯುತ್‌ ತಂತಿಗಳ ಕುರಿತು ಜಾಗೃತಿ ವಹಿಸಿ.

ಅರ್ಥಿಂಗ್‌
ನಿಮ್ಮ ಮನೆಯ ಅರ್ಥಿಂಗ್‌ ವ್ಯವಸ್ಥೆಯನ್ನು ಸರಿಯಾಗಿದೆಯೇ ಎಂದು ಮಳೆಗಾಲದ ಪೂರ್ವದಲ್ಲೇ ಪರೀಕ್ಷಿಸಿಕೊಳ್ಳಿ ಸಿಡಿಲು ಸಂದರ್ಭ ನಿಮ್ಮ ಮನೆಯ ವಿದ್ಯುತ್‌ ಉಪಕರಣಗಳು ಹಾಳಾಗದಂತೆ ನೋಡಿಕೊಳ್ಳುವುದಲ್ಲದೆ, ನಿಮ್ಮ ಮನೆಯ ವಸ್ತುಗಳಲ್ಲಿ ವಿದ್ಯುತ್‌ ಸೋರಿಕೆಯಿಂದ ಶಾಕ್‌ ತಗುಲುವುದನ್ನು ತಡೆಗಟ್ಟುತ್ತದೆ. ಸಾರ್ವಕಾಲಿಕವಾಗಿ ಅರ್ಥಿಂಗ್‌ ವ್ಯವಸ್ಥೆ ಎನ್ನುವುದು ಮನೆಯ ರಕ್ಷಾ ಕವಚವೆನ್ನಬಹುದು. ಪ್ರತಿ ಮಳೆಗಾಲದ ಪೂರ್ವದಲ್ಲಿ ಅರ್ಥಿಂಗ್‌ ವ್ಯವಸ್ಥೆಗೆ ಇಲೆಕ್ಟ್ರೀಷಿಯನ್‌ ಸಲಹೆಯಂತೆ ಉಪ್ಪು ಮತ್ತು ಇದ್ದಿಲು ಹಾಕುವುದು ಸೂಕ್ತ. 

 ಹರೀಶ್‌ ಕಿರಣ್‌ ತುಂಗಾ, ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next