Advertisement

“ಅಕ್ಷರಗಳ ಮಳೆ ತೊಯ್ದು ನಿರಾಳವಾಯ್ತು…’

03:20 PM Jun 09, 2021 | Team Udayavani |

ಮುಂಜಾವಿನ ಆ ಹೊತ್ತು ಅದೇಕೋ ನಿದ್ದೆ ಮಂಪರಿನಲ್ಲಿ ಅರೆಬರೆ ಕನಸ ಹಿಂದೆ ಸಾಗುತ್ತಿದ್ದೆ. ಚುಮು ಚುಮು ಚಳಿಯ ಆ ಬೆಳಗಿನ ಜಾವಕ್ಕೆ ಚಿಟಪಟನೆಂದು ಮಾರ್ದನಿಸುತ್ತಿತ್ತು, ಜೋಗುಳ ಹಾಡಿದಂತೆ ಮಳೆಹನಿಗಳ ಕಲರವ. ಹೀಗೆ ಅಂತೂ ಇಂತೂ ಕನಸೆಲ್ಲವನು ನಾಳೆಗೆಂದು ಮುಂದೂಡಿದೆ ಹೊರಗೆ ಕರೆಯುತಿಹ ಮಳೆಹನಿಗಳ ಸವಿನೋಟದ ದೃಶ್ಯ ಕಣ್ಣಾರೆ ಸವಿಯಲು, ಕಿರು ಸಾಲುಗಳಲಿ ಸೆರೆಹಿಡಿಯಲು. ಹೌದು, ಈ ರಮಣೀಯತೆ ಕುರಿತು ಗೀಚಲು ಅನುವಾಗಿ ಕೊಂಚ ಬಿಡುವು ಮಾಡಿ ಕುಳಿತೆ ಲೇಖನಿಯ ಹಿಡಿದು.

Advertisement

ಮಳೆ, ವರ್ಷ ಋತುವಿನ ಕಾಲದಲ್ಲಿ ಈ ಧರೆಗೆ ಸೌಗಂಧದ ಕಂಪನ್ನು ಧಾರೆ ಎರೆವ ಪರಿಯ ಬಾಯಾ¾ತಲೆಂತು ಬಣ್ಣಿಸಲಿ. ಪದಗಳೆಲ್ಲವೂ ನನ್ನೇ ಮೀರಿ ಸಾಲು-ಸಾಲು ಹಾಳೆಯಲ್ಲಿ ಉದುರತೊಡಗಿದವು, ಮಳೆಹನಿಗಳು ಒಂದರ ಹಿಂದೊಂದು ಧರೆಯ ಚುಂಬಿಸುವಂತೆ. ನಿಜವಲ್ಲವೇ, ಇಳೆಯ ಬೇಗೆ ತಣಿಸಿ, ಖಗಮೃಗಗಳ ದಾಹ ತೀರಿಸಿ, ಉತ್ತು ಬೆಳೆವ ಭೂಮಿಗೆ ತನ್ನನ್ನು ಅರ್ಪಿಸುವ ನಿಸ್ವಾರ್ಥಿ ಮಳೆರಾಯ. ನಿನ್ನ ಬಗೆಗಿನೊಂದು ಬಣ್ಣನೆಯ ಮಾತು. ಭೂಮಿಯಲ್ಲಿ ಬಿತ್ತಿದ್ದೆಲ್ಲವೂ ಸಮೃದ್ಧವಾಗಿ ಫ‌ಲಿಸಲಿ ಎಂಬ ರೈತನ ಇಂಗಿತವ ಮಾರ್ಮಿಕವಾಗಿ ನೀನೇ ಪೂರೈಸುವೆ, ಆತನ ಪರಿಶ್ರಮಕೆ ನಿನ್ನ ಪ್ರತೀ ಹನಿಯ ಸಾಂಗತ್ಯ ನೀಡುವೆ. ನಿಸರ್ಗದ ಸರ್ವ ಜೀವಜಂತುಗಳಿಗೆ ನಿನ್ನ ಕೃಪೆಯದು ಅಪಾರ. ಪ್ರತಿಯೊಂದರ ಉಸಿರಾಟಕ್ಕೆ ಹಸುರ ಚಿಗುರಿಸಿ ಹಸನಾಗಿಸಿದೆ  ಈ ಧರೆ. ಕಾಲದಿಂದ ಕಾಲಕ್ಕಾಗುವಷ್ಟು ಉಪಕಾರಿಯಾಗುವೆ. ನಿನ್ನೆಲ್ಲ ಈ ಗುಣಗಾನ  ಮೀರಿ ಎನಿತಾದರೂ ಚ್ಯುತಿ ಬರಬಹುದೆಂದರೆ ಅದು ನಿನ್ನ ಉದ್ವೇಗದಿಂದಷ್ಟೇ. ಒಂದೊಮ್ಮೆ ಕೋಪಿತಗೊಂಡೆನೆಂದರೆ ಮುಗಿಯಿತು. ಅದೇ ಅತಿವೃಷ್ಟಿ.

ಅದೇನಿದ್ದರೂ ಇವೆಲ್ಲಕ್ಕೂ ಮೀರಿದ ಹಿತ ಮಳೆಹನಿ ತರುಲತೆಯ ಮುತ್ತಿಕ್ಕಿ, ಇಳೆಯ ತಂಪಾಗಿಸಿ, ನಳನಳಿಸುವ ಭಾಸ್ಕರನಿಗೆ ಹಸುರು ತೋರಣಗಳ ಸಾಲಿನಲ್ಲಿ ಆಹ್ವಾನಿಸುವ ಆ ನಯನ ಮನೋಹರತೆ ಬಣ್ಣನೆಗೆ ನಿಲುಕದ್ದು. ಆವಶ್ಯಕತೆಗೊಮ್ಮೆ ಕಾಮನಬಿಲ್ಲ ಎಳೆತಂದು ಬಾನೊಳು ಬಾಗಿಸಿ ಸೆರೆಹಿಡಿವೆ ಜನಮನವ ಬಹು ನಾಜೂಕಿನಿಂದ. ಈ ರೀತಿ ಅವೆಷ್ಟೋ ಮಾತಿವೆ ಹೇಳಲು, ಬಹುಶಃ ಈ ಸಮಯ ನನ್ನ ಹಿಂದೆ ಸರಿಸುತ್ತಿದೆ.

ಮಳೆ ಬರಿಯ ಪ್ರಕೃತಿಯ ಸೌಂದರ್ಯಕ್ಕಷ್ಟೇ ಅಲ್ಲ ಒಂದು ಯುಗಳಗೀತೆಗೂ ನಾಂದಿಯಾಗುವುದು.

 

Advertisement

ತನುಜಾ ಎನ್‌. ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next