ಮಡಿಕೇರಿ: ಪಕೃತಿ ವಿಕೋಪದಲ್ಲಿ ಮನೆಕಳೆದುಕೊಂಡ ಸಂತ್ರಸ್ತರಿಗೆ ಅದೇ ಗ್ರಾಮ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು ಮತ್ತು ಸಂತ್ರಸ್ತರ ಖರ್ಚು, ವೆಚ್ಚವನ್ನು ಸಧ್ಯದ ಮಟ್ಟಿಗೆ ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಪ್ರಮುಖರು ಹಾಗೂ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರ ಹೊರಾಟ ಸಮಿತಿಯ ಅನೇಕರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂತ್ರಸ್ತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಿಲ್ಲಾ ಬಿಜೆಪಿ ಹಾಗೂ ಕೊಡಗು ಪ್ರಕೃತಿ ಹೊರಾಟ ಸಮಿತಿ ಮಳೆಗಾಲ ಆರಂಭಕ್ಕೂ ಮೊದಲು ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವಂತೆ ಒತ್ತಾಯಿಸಿದರು.
ಮಹಾಮಳೆಯಿಂದ ಸಂತ್ರಸ್ತರಾ ದವರಿಗೆ ಸಮರ್ಪಕವಾಗಿ ಯಾವುದೇ ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಬಿಜೆಪಿ ಪ್ರಮುಖರು ಆರೋಪಿಸಿದರು.
ತೀವ್ರ ಹಾನಿಗೊಳಗಾದ 8 ಗ್ರಾ.ಪಂ ವ್ಯಾಪ್ತಿಯ ಸಂತ್ರಸ್ತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರ ತಕ್ಷಣ 8 ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಸಂತ್ರಸ್ತರ ಬೆಳೆಸಾಲ, ಕೃಷಿ ಅಭಿವೃದ್ಧಿ ಸಾಲ, ಯಂತ್ರೋಪಕರಣಗಳ ಮೇಲಿನ ಸಾಲ, ವಿದ್ಯಾಭ್ಯಾಸ ಸಾಲ, ತೋಟದ ಮನೆ ನಿರ್ಮಾಣದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದರು. ಪ್ರಕೃತಿ ವಿಕೋಪದ ಸಂದರ್ಭ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮನೆಯ ದಾಖಲಾತಿಗಳು ಸೇರಿದಂತೆ ಕೆಲವು ಪ್ರಮುಖ ದಾಖಲೆಗಳು ಕಳೆದು ಹೋಗಿದ್ದು, ಶೀಘ್ರ ಇವುಗಳನ್ನು ದೊರಕಿಸಿಕೊಡಬೇಕು ಎಂದು ಸಂತ್ರಸ್ತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂತ್ರಸ್ತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಮಳೆಗಾಲಕ್ಕೆ ಮೊದಲೇ ಮನೆಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಸೂಚಿಸುವ ಸ್ಥಳದಲ್ಲಿ ಮನೆಗಳನ್ನು ಪಡೆದುಕೊಳ್ಳುವುವುದು ಸೂಕ್ತವೆಂದು ಸಂತ್ರಸ್ತರ ಮನವೊಲಿಸುವ ಪ್ರಯತ್ನ ಮಾಡಿದರು.