Advertisement
ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರು ಮೊಗದಲ್ಲಿ ಸಂತಸ ಮೂಡಿದ್ದು, ಹೊಲಕ್ಕೂ ಕಾಲಿಡದಂಥ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಮಧ್ಯರಾತ್ರಿಯಿಂದಲೂ ಮಳೆ ಶುರುವಾಗಿದ್ದು, ಎಡೆಬಿಡದೇ ಮಳೆ ಆಗುತ್ತಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ.
Related Articles
Advertisement
ಧರೆಗುರುಳಿದ ಮರಗಳು: ಟಿಳಕವಾಡಿಯಲ್ಲಿರುವ ಜ್ಞಾನೇಶ ಕಾಮತ ಅವರಿಗೆ ಸೇರಿದ ಶಾಂತಾದುರ್ಗ ಟ್ರೇಡರ್ ಅಂಗಡಿ ಮೇಲೆ ಮರ ಬಿದ್ದಿದೆ. ಹೀಗಾಗಿ ಅಂಗಡಿಯ ಬಿಡಿ ಭಾಗಗಳು, ಗಾಜು ಒಡೆದು ತೊಂದರೆಯಾಗಿದೆ. ಜತೆಗೆ ಕ್ಲಬ್ ರಸ್ತೆಯಲ್ಲಿರುವ ಗಿರಿಯಾಜ್ ಮಳಿಗೆ ಎದುರಿನ ಬೃಹತ್ ಮರ ಧರೆಗುರುಳಿದೆ.
ಬೆಳಗಾವಿ ತಾಲೂಕಿನ ಬಸವನ ಕುಡಚಿ, ಸಾಂಬ್ರಾ, ನಿಲಜಿ, ಬಾಳೇಕುಂದ್ರಿ, ಮಾರಿಹಾಳ, ಸುಳೇಭಾವಿ, ಮೋದಗಾ, ಮುಚ್ಚಂಡಿ, ಕಣಬರ್ಗಿ, ಚಂದಗಡ, ಕಣಬರ್ಗಿ, ಚಂದೂರ, ಕಬಲಾಪುರ, ತುಮ್ಮರಗುದ್ದಿ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ. ಖಾನಾಪುರ ತಾಲೂಕಿನಲ್ಲಿಯೂ ಎರಡು ದಿನದಿಂದ ಸತತ ಮಳೆ ಆಗುತ್ತಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ತಾಲೂಕಿನ ಹಳ್ಳ-ಕೊಳ್ಳಗಳಲ್ಲಿಯೂ ನೀರು ತುಂಬಿಕೊಂಡಿದೆ. ಹೊರಗೆ ಬರಲಾರದಷ್ಟು ಮಲೆ ಆಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಶಿಥಿಲಗೊಂಡಿರುವ ಮನೆಗಳ ಗೋಡೆಗೂ ಕುಸಿದಿರುವ ವರದಿಯಾಗಿದೆ.
ನೀರು ಹೊರ ಚೆಲ್ಲುವುದೇ ಸಾಹಸ:
ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ್ದರಿಂದ ಹೊರ ಚೆಲ್ಲಲು ಸಾಹಸ ಮಾಡಬೇಕಾಗಿದೆ. ತಂಬಿಗೆ, ಬಕೆಟ್ದಿಂದ ನೀರನ್ನು ಹೊರ ಚೆಲ್ಲುತ್ತಿದ್ದಾರೆ. ರವಿವಾರ ಬೆಳಗಿನ ಜಾವ ಜೋರಾಗಿ ಮಳೆ ಬಂದಿದ್ದರಿಂದ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಮನೆ ಮಂದಿಯೆಲ್ಲ ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಸ್ಥಿತಿಯೂ ನಿರ್ಮಾಣವಾಗಿತ್ತು. ಶಾಸ್ತ್ರಿ ನಗರ, ಮಾರುತಿ ನಗರದ ಸುತ್ತಲೂ ಅನೇಕ ಮನೆಗಳು ಜಲಾವೃತಗೊಂಡಿದ್ದವು.
ಮಳೆಗೆ ಮುರಿದು ಬಿದ್ದ ಕೊಟ್ಟಿಗೆ:
ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಡಗಾಂವಿಯ ರೈತ ಗಲ್ಲಿಯಲ್ಲಿ ಜಾನುವಾರು ಕಟ್ಟುವ ಕೊಟ್ಟಿಗೆ ಮುರಿದು ಬಿದ್ದು ದನ ಗಾಯಗೊಂಡಿದೆ. ರೈತ ಗಲ್ಲಿಯ ಗಜಾನನ ಕಲ್ಲಪ್ಪ ಬಿರ್ಜೆ ಎಂಬವರಿಗೆ ಸೇರಿದ ಈ ಕೊಟ್ಟಿಗೆ ಕುಸಿದು ಬಿದ್ದಿದ್ದರಿಂದ ಕೊಟ್ಟಿಗೆ ಒಳಗೆ ಕಟ್ಟಿದ್ದ ಏಳು ತಿಂಗಳ ಗರ್ಭಿಣಿ ದನದ ಕಾಲು ಹಾಗೂ ತಲೆಗೆ ಭಾರೀ ಪೆಟ್ಟಾಗಿದೆ. ಸಂಪೂರ್ಣ ಕೊಟ್ಟಿಗೆ ಮುರಿದು ಬಿದ್ದಿದ್ದರಿಂದ ಸಾವಿರಾರು ರೂ. ಹಾನಿ ಸಂಭವಿಸಿದೆ.
ಹೊಲ-ಗದ್ದೆಗಳೆಲ್ಲ ಜಲಾವೃತ:
ಧಾರಾಕಾರ ಮಳೆ ಸುರಿದಿದ್ದರಿಂದ ಬೆಳಗಾವಿ ಹಾಗೂ ಖಾನಾಪುರ ತಾಲೂಕಿನ ಹೊಲ-ಗದ್ದೆಗಳೆಲ್ಲ ಜಲಾವೃತಗೊಂಡಿವೆ. ಬಳ್ಳಾರಿ ನಾಲಾ ಸುತ್ತಲಿನ ಹೊಲಗಳಲ್ಲಿ ನೀರು ನಿಂತಿದೆ. ಬಿಸಿಲನ ಬೇಗೆಯಿಂದ ಬೆಂದಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮುಂಗಾರು ಮಳೆ ಎಡೆಬಿಡದೇ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.