Advertisement

ಮಳೆ ಇಳಿಮುಖವಾಗುವ ಸಾಧ್ಯತೆ

06:15 AM Aug 21, 2018 | |

ಬೆಂಗಳೂರು: ಕೆಲದಿನಗಳಿಂದ ಅವಾಂತರ ಸೃಷ್ಟಿಸಿರುವ ಮಳೆ ಅಬ್ಬರ ಕೊಂಚತಗ್ಗಿದ್ದು, ಮುಂದಿನ 3 -4 ದಿನಗಳಲ್ಲಿ ಇಳಿಮುಖವಾಗುವ ಸಾಧ್ಯತೆಯಿದೆ.

Advertisement

ಈ ಮೊದಲು ಬಂಗಾಳಕೊಲ್ಲಿಯ ವಾಯವ್ಯದಲ್ಲಿ ಆ.20ರಂದು ವಾಯುಭಾರ ಕುಸಿತ ಉಂಟಾಗಲಿದ್ದು, ಇದರಿಂದ ಮತ್ತಷ್ಟು ಮಳೆ ಆಗಲಿದೆ ಎಂಬ ಮುನ್ಸೂಚನೆ ಇತ್ತು. ಈಗ ಅದು ಒಡಿಶಾದಿಂದ ಮಧ್ಯಪ್ರದೇಶದತ್ತ ಮುಖಮಾಡಿದೆ. ಹಾಗಾಗಿ, ಮಳೆ ಸಾಧ್ಯತೆ ಗಳು ಕಡಿಮೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟ್ಟಪ್ರದೇಶ ಮತ್ತು ಕರಾವಳಿಯಲ್ಲಿ ಆಯ್ದ ಭಾಗಗಳಲ್ಲಿ ಮಾತ್ರ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಮೂರ್‍ನಾಲ್ಕು ದಿನಗಳಿಗೆ ಹೋಲಿಸಿದರೆ, ಇದರ ಪ್ರಮಾಣ ಕಡಿಮೆ ಇರಲಿದೆ. ಆದರೆ, ಉತ್ತರ ಒಳನಾಡಿನ ಬೀದರ್‌,ಬಾಗಲಕೋಟೆ, ವಿಜಯಪುರ ಸುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.

ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮುಂದಿನ 3 ದಿನಗಳು ಚದುರಿದಂತೆ ಮಳೆಯಾಗಲಿದ್ದು, ಕೆಲವೆಡೆ ಮಾತ್ರ ವ್ಯಾಪಕ ಮಳೆ ಬೀಳಲಿದೆ. ಈ ಮಧ್ಯೆ ಮಡಿಕೇರಿಯಲ್ಲಿ ಸೋಮವಾರ ಬೆಳಿಗ್ಗೆ 90 ಮಿ.ಮೀ. ಮಳೆ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ದರೂ,ಕೆಲವೆಡೆ ಮಳೆಯಿಂದಾಗಿ ಸೋಮವಾರವೂ ಹಾನಿಯುಂಟಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಸೋಮವಾರ ಇಳಿಮುಖವಾಗಿದೆ.

Advertisement

ಕೊಪ್ಪ ತಾಲೂಕಿನ ಬಂಡಿಗಡಿ ಸಮೀಪದ ಈಚಲಬೈಲ್‌ ಗ್ರಾಮದಲ್ಲಿ ಭೂಕುಸಿತವುಂಟಾಗಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಹಾಗೂ 4 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಟ್ರಾನ್ಸ್‌ಫಾರ್ಮರ್‌ ಬಿದ್ದಿರುವುದರಿಂದಾಗಿ ಈ ಭಾಗದ 4 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಹೀಗಾಗಿ ಗಡಿ ಭಾಗದ ನದಿಗಳು ಭೋರ್ಗರೆಯುತ್ತಿದ್ದು, ಇದೇ ರೀತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದ್ದರೆ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಮಹಾರಾಷ್ಟ್ರದ ವಿವಿಧ ಜಲಾಶಯಗಳು ಕಳೆದ ಒಂದು ವಾರದ ಹಿಂದೆ ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಯ ಬಿಟ್ಟಿದ್ದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next