Advertisement

ನಗರದಲ್ಲಿ ಎರಡನೇ ದಿನವೂ ಸುರಿದ ಮಳೆ

12:19 PM Apr 30, 2017 | Team Udayavani |

ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನ ಸುರಿದ ಗಾಳಿಸಹಿತ ಭಾರಿ ಮಳೆಗೆ 15ಕ್ಕೂ ಹೆಚ್ಚು ಮರಗಳು ಧರೆಗುರುಳಿ, ಹಲವೆಡೆ ಮರದ ರೆಂಬೆಗಳು ಮುರಿದು ಬಿದ್ದಿವೆ. ಕೆಂಗೇರಿ ಉಪನಗರದಲ್ಲಿ ಮರ ಬಿದ್ದು ಕಾರು ಜಖಂಗೊಂಡ ಘಟನೆ ನಡೆದಿದೆ.

Advertisement

ಪೂರ್ವ ಮುಂಗಾರು ಮಾರುತಗಳು ಚುರುಕುಗೊಂಡಿದ್ದರಿಂದ ಹಾಗೂ ವಾಯೂಭಾರ ಕುಸಿತದಿಂದಾಗಿ ನಗರದಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಯಿತು. ಭಾನುವಾರ ಕೂಡ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗಾಳಿ ಮತ್ತು ಮಳೆ ಪ್ರಭಾವ ದಕ್ಷಿಣದಲ್ಲಿ ಹೆಚ್ಚಿದೆ. ಹಾಗಾಗಿ, ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲೇ 10ಕ್ಕೂ ಹೆಚ್ಚು ಮರಗಳು ಮತ್ತು ಮರದ ರೆಂಬೆಗಳು ನೆಲಕಚ್ಚಿವೆ. ಇನ್ನು ಬ್ರಿಗೇಡ್‌ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್‌ ಸ್ಟ್ರೀಟ್‌ಗೆ ಹೋಗುವ ರಸ್ತೆಯಲ್ಲಿ ನೀರು ಆವರಿಸಿತ್ತು. ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು.

ಓಕಳಿಪುರ, ಮೆಜೆಸ್ಟಿಕ್‌ ಆಸುಪಾಸು, ಮಲ್ಲೇಶ್ವರ ಹಾಗೂ  ಮಡಿವಾಳದಲ್ಲಿ ವಾಹನಸಂಚಾರ ನಿಧಾನಗತಿಯಲ್ಲಿತ್ತು. ಅಂಡರ್‌ಪಾಸ್‌ ಮತ್ತು ಜಂಕ್ಷನ್‌ಗಳಲ್ಲಿ ನೀರು ನಿಂತಿದ್ದರಿಂದ ಕೆಲಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು. ರಜೆಗಳ ಹಿನ್ನೆಲೆಯಲ್ಲಿ ಊರಿಗೆ ಹೋಗುವವರು ಮೆಜೆಸ್ಟಿಕ್‌ನತ್ತ ಮುಖಮಾಡಿದ್ದರಿಂದ ಈ ಭಾಗದಲ್ಲಿ ಟ್ರಾಫಿಕ್‌ ಹೆಚ್ಚಿತ್ತು. 

ಕಾರು ಜಖಂ: ಗಾಳಿ-ಮಳೆ ಹೊಡೆತಕ್ಕೆ ಕೆಂಗೇರಿ ಉಪನಗರದ ಪೊಲೀಸ್‌ ಕ್ವಾಟ್ರìಸ್‌ ಬಳಿ ಇಂಡಿಕಾ ಕಾರಿನ ಮೇಲೆ ಮರ ಬಿದ್ದಿದ್ದರಿಂದ ಕಾರು ಜಖಂಗೊಂಡಿತು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು. ಜ್ಞಾನಭಾರತಿ 3ನೇ ಬ್ಲಾಕ್‌, ವಡಗೆರೆ ಹಳ್ಳಿ, ಆರ್‌.ಆರ್‌.ನಗರ, ಬಿಇಎಂಎಲ್‌ ಲೇಔಟ್‌, ಬಿಎಚ್‌ಇಎಲ್‌ ಲೇಔಟ್‌, ಮಣಿಪಾಲ್‌ ಆಸ್ಪತ್ರೆ ಬಳಿ, ನಾಗದೇವನಹಳ್ಳಿ, ದುಬಾಸಿಪಾಳ್ಯ, ವಿದ್ಯಾಪೀಠ ವೃತ್ತ, ಹೊಸಹಳ್ಳಿ, ವಿಜಯನಗರ, ಜಯನಗರ 11ನೇ ಮುಖ್ಯರಸ್ತೆಯಲ್ಲಿ ಮರ ಮತ್ತು ಮರದ ರೆಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ. 

Advertisement

ಎಲ್ಲೆಲ್ಲಿ ಎಷ್ಟು ಮಳೆ?: ನಗರದ ದಕ್ಷಿಣದ ಗೊಲ್ಲಹಳ್ಳಿಯಲ್ಲಿ ಅತಿಹೆಚ್ಚು 40.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಕೆಂಗೇರಿಯಲ್ಲಿ 29, ಕುಮಾರಸ್ವಾಮಿ ಲೇಔಟ್‌ 18.5, ಹೆಮ್ಮಿಗೆಪುರ 37, ಕೋಣನಕುಂಟೆ 34, ಬೇಗೂರು 11, ಕೋನೇನ ಅಗ್ರಹಾರ 6.5, ಕೋರಮಂಗಲ 7.5, ವಿವಿ ಪುರ 26.5, ಅಗ್ರಹಾರ ದಾಸರಹಳ್ಳಿ 23, ಉತ್ತರಹಳ್ಳಿ 32.5, ಸಾರಕ್ಕಿ 20.5, ರಾಜಮಹಲ್‌ ಗುಟ್ಟಹಳ್ಳಿ 7.5, ಪುಲಕೇಶಿನಗರ ಮತ್ತು ಕಮ್ಮನಹಳ್ಳಿಯಲ್ಲಿ 5, ಮಾರತ್‌ಹಳ್ಳಿಯಲ್ಲಿ 6 ಮಿ.ಮೀ. ಮಳೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next