ಮೈಸೂರು: ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರ ನಾಗರಿಕರ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮರಗಳು ಧರೆಗುರುಳುತ್ತಿರುವ ಪರಿಣಾಮ ಸಾರ್ವಜನಿಕರು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮೆಕುನು ಚಂಡಮಾರುತದ ಪರಿಣಾಮ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಿವಿಧ ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬೀಳುತ್ತಿವೆ. ಸಂಜೆ ವೇಳೆಯಲ್ಲಿ ಸುರಿಯುವ ಮಳೆಯಿಂದ ಸಾರ್ವಜನಿಕರು ಹೈರಾಣಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಾತ್ರಿ ವೇಳೆಯಲ್ಲಿ ಸುರಿಯುವ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ನಡುವೆ ಮುರಿದು ಬೀಳುತ್ತಿರುವ ಮರಗಳನ್ನು ತೆರವುಗೊಳಿಸುವುದೇ ಪಾಲಿಕೆಗೆ ತಲೇ ನೋವಾಗಿ ಪರಿಣಮಿಸಿದೆ.
ಅಂತೆಯೇ ಶುಕ್ರವಾರ ರಾತ್ರಿ ಸುರಿದ ಮಳೆಗೆ ನಗರದ ಅನೇಕ ಕಡೆ ಮರಗಳು ಧರೆಗುರುಳಿದ್ದು, ಒಂಟಿಕೊಪ್ಪಲಿನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ.
ತಿಲಕ್‌ನಗರದ ಮೂಕ ಮತ್ತು ಅಂಧ ಮಕ್ಕಳ ಶಾಲೆ, ಮಾತೃಮಂಡಳಿ ವೃತ್ತ ಸೇರಿದಂತೆ ಹಲವಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಕುಕ್ಕರಹಳ್ಳಿಕೆರೆಯ ಪಾದಚಾರಿ ಮಾರ್ಗದ ಮರವೊಂದು ಧರೆಗುರುಳಿದ್ದ ಪರಿಣಾಮ ಶನಿವಾರ ಮುಂಜಾನೆ ವಾಯುವಿಹಾರಕ್ಕೆಂದು ಬಂದವರಿಗೆ ಅಡ್ಡಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಾಲಿಕೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ. ಪ್ರತಿನಿತ್ಯ ಮರಗಳು ಧರೆಗುರುಳುತ್ತಿರುವದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ ಒಣಮರಗಳನ್ನು ತೆರವು ಗೊಳಿಸಲು ಮುಂದಾಗಿದೆ. ಅರಮನೆ ಸುತ್ತುಮುತ್ತ ಇದ್ದ ಒಣ ಮರ, ಒಣ ರೆಂಬೆಗಳನ್ನು ಕಟಾವು ಮಾಡಿದೆ.
ಅಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿರುವ ಒಣ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಹವಾಮಾನ ಇಲಾಖೆ ಮೇ 29ರವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದಿರಬೇಕಿದೆ.