ಗದಗ: ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಅಲ್ಪಸ್ವಲ್ಪ ಮಳೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಹೆಚ್ಚುತ್ತಿರುವ ತಾಪಮಾನದಿಂದ ಬಸವಳಿದ್ದಿದ್ದ ಜನರಿಗೆ ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ತಂಪು ವಾತಾವರಣ ಕಂಡು ಬಂತು.
ನಗರದಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಏಕಾಏಕಿ ಬಿರುಸಿನಿಂದ ಆರಂಭಗೊಂಡ ಮಳೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಸುರಿಯಿತು. ಬಳಿಕ ಆಗಾಗ ಬಿರುಸಿನ ಮಳೆಯೊಂದಿಗೆ ರಾತ್ರಿ 8.30ರವರೆಗೆ ಸಾಧಾರಣವಾಗಿ ಮಳೆಯಾಯಿತು. ಈ ಮಧ್ಯೆ ಒಂದೆರಡು ಬಾರಿ ಭಾರೀ ಗುಡುಗು-ಸಿಡಿಲಿನಿಂದಾಗಿ ಅವಳಿ ನಗರದ ಸಾರ್ವಜನಿಕರು ಬೆಚ್ಚಿ ಬೀಳುವಂತಾಯಿತು.
ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಿಂತ ಕೆಳಗಿರುವ ಅಂಗಡಿ- ಮುಂಗಟ್ಟುಗಳು ಹಾಗೂ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಇಲ್ಲಿನ ರೋಟರಿ ಸರ್ಕಲ್ ಸಮೀಪದ ಮಹಾಲಕ್ಷ್ಮಿ ಟಾಕೀಸ್ ಮುಂಭಾಗದ ಸಿಂಡಿಕೇಟ್ ಬ್ಯಾಂಕ್ ಬಿಲ್ಡಿಂಗ್‌ನ ಕೆಳ ಮಹಡಿಗೆ ನೀರು ನುಗ್ಗಿತ್ತು. ಸುಮಾರು ಎರಡು ಅಡಿಗಳಷ್ಟು ನೀರು ನಿಂತಿದ್ದರಿಂದ ವರ್ತಕರು ತಮ್ಮ ಸಾಮಾನು, ಸರಂಜಾಮುಗಳನ್ನು ಕಟ್ಟಿಟ್ಟು, ಬಾಗಿಲು ಹಾಕುವಂತಾಯಿತು.
ಸಂಜೆ ವೇಳೆ ಮಳೆಯಾಗಿದ್ದರಿಂದ ತರಕಾರಿ ಖರೀದಿ ಸೇರಿದಂತೆ ನಾನಾ ಉದ್ದೇಶಗಳಿಗಾಗಿ ವಾಣಿಜ್ಯ ಪ್ರದೇಶಕ್ಕೆ
ಆಗಮಿಸಿದ್ದ ಸಾರ್ವಜನಿಕರು ಪರದಾಡುವಂತಾಯಿತು.