Advertisement

ತಗ್ಗಿಲ್ಲ ಮಳೆಯಬ್ಬರ, ನೆರೆ ಈಗಲೂ ಅಪಾಯಕರ 

06:00 AM Jun 13, 2018 | Team Udayavani |

ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಶರಾವತಿ, ನೇತ್ರಾವತಿ, ಕುಮಾರಧಾರಾ, ತುಂಗಾ, ಭದ್ರಾ, ಅಘನಾಶಿನಿ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಲೆನಾಡಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಶಿವಮೊಗ್ಗ ಕೋರ್ಪಲಯ್ಯ ಛತ್ರದ ಬಳಿ ಇರುವ ಮಂಟಪ ಮುಳುಗುವ ಹಂತಕ್ಕೆ ಬಂದಿದೆ. ಭದ್ರಾ ಡ್ಯಾಂಗೆ ಒಂದೇ ದಿನದಲ್ಲಿ 4 ಅಡಿಗಳಷ್ಟು ನೀರು ಹರಿದು ಬಂದಿದೆ. ಗಾಜನೂರು ಜಲಾಶಯದಿಂದ 47,616 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

Advertisement

ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ವರ್ಷಧಾರೆ ಜೋರಾಗಿದ್ದು, ಜಲಾಶಯದ ನೀರಿನ ಮಟ್ಟ 1755.80 (ಗರಿಷ್ಟ ಮಟ್ಟ 1819) ಅಡಿಗೆ ತಲುಪಿದೆ. ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದ್ದು, ಜಲಪಾತ ವೀಕ್ಷಿಸಲು ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸತೊಡಗಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ಕುಶಾವತಿ ನದಿ ಉಕ್ಕಿ ಹರಿದಿದ್ದು, ತೋಟ ಗದ್ದೆಗಳೆಲ್ಲ ಜಲಾವೃತಗೊಂಡಿದೆ. ತೀರ್ಥಹಳ್ಳಿಯ ಗಾಂಧಿನಗರದಲ್ಲಿ
ಧರೆ ಕುಸಿದು ಎರಡು ಮನೆಗಳು ಅಪಾಯದ ಭೀತಿ ಎದುರಿಸುತ್ತಿವೆ. ಭಾರತೀಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿದ್ದು, ಸಂಚಾರಕ್ಕೆ
ತೊಂದರೆಯುಂಟಾಗಿದೆ. ಕುರುವಳ್ಳಿಯಲ್ಲಿ ಧರೆ ಕುಸಿದು ಶಿಲ್ಪಕಲಾಕೇಂದ್ರಕ್ಕೆ ಅಪಾಯ ಎದುರಾಗಿದೆ. ಮಂಡಗದ್ದೆ  ಪಕ್ಷಿಧಾಮದಲ್ಲಿ ಹಕ್ಕಿಗಳ ಗೂಡು ಹಾಗೂ ಮೊಟ್ಟೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ.

ಸಂತಾನಾಭಿವೃದಿಟಛಿಗೆಂದು ದೇಶ-ವಿದೇಶಗಳಿಂದ ಆಗಮಿಸುವ ಬಾನಾಡಿಗಳು ತೊಂದರೆಗೆ ಸಿಲುಕಿವೆ. ಖಾನಾಪುರ, ಕಣಕುಂಬಿಯಲ್ಲಿ 3 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ, ಸಂಗೊಳ್ಳಿ ಗ್ರಾಮಗಳ ಮಧ್ಯದ ಮಲ ಪ್ರಭಾ ನದಿಗೆ ಇತ್ತೀಚೆಗೆ ನಿರ್ಮಿಸಿದ್ದ ಕಿರು ಬ್ಯಾರೇಜ್‌ ಮೇಲಿನ ಸಿಮೆಂಟ್‌ ರಸ್ತೆ ಮಳೆಗೆ ಕುಸಿದಿದೆ. ಎರಡು
ಗ್ರಾಮಗಳ ಸಂಪರ್ಕ ಕಡಿದು ಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ಮಣ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಳಿಯಾ ಲದಲ್ಲಿ ಮನೆಗಳ ಮೇಲೆ ಮರ ಬಿದ್ದು
ಸುಮಾರು 20,000 ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ.

ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವು ದರಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಹಾಸನ ಜಿಲ್ಲೆ ರಾಮನಾಥಪುರದ ರಾಮೇಶ್ವರ ದೇವಾಲಯ, ಸಕಲೇಶಪುರ ಸಮೀಪದ ಹೊಳೆಮಲ್ಲೇಶ್ವರಸ್ವಾಮಿ ದೇವಾಲಯಗಳ ಬಳಿ ನದಿಯ ನೀರು ಅಪಾಯದ ಮಟ್ಟಕ್ಕೆ ತಲುಪಿದೆ. ಸಕಲೇಶಪುರ ತಾಲೂಕಿನ ಹೊಂಗಡ ಹಳ್ಳ, ಕುಶಾಲನಗರ, ಕುಡುಗರ ಹಳ್ಳಿ ಸೇರಿದಂತೆ ಹಲವೆಡೆ ಭೂಕುಸಿತ ಉಂಟಾಗಿದ್ದು, ಮರಗಳು 
ಧರೆಗುರುಳಿವೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಭತ್ತ ಹಾಗೂ ಕಾಫಿ  ತೋಟಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ.

ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಳ: ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. 21 ಸಾವಿರ ಕ್ಯೂಸೆಕ್‌ಗಳಷ್ಟು ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಕೇವಲ ಕುಡಿಯುವ ಬಳಕೆಗಾಗಿ 318 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಹರಿಯುವ ಹೇಮಾವತಿ ಜಲಾಶಯಕ್ಕೆ ಮಂಗಳವಾರ 30,000 ಕ್ಯೂಸೆಕ್‌ ಒಳಹರಿವು ದಾಖಲಾಗಿದ್ದು, ಒಂದೇ ದಿನ 6 ಅಡಿ ಏರಿಕೆಯಾಗಿದೆ. ಇದೇ ವೇಳೆ, ಸಾಗರ, ಶಿರಸಿ, ಸಿದ್ದಾಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ. 

Advertisement

ಚಾರ್ಮಾಡಿ, ಶಿರಾಡಿ ಘಾಟ್‌ ಬಂದ್‌ 
ಚಿಕ್ಕಮಗಳೂರು/ಮಂಗಳೂರು: ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಕಾಂಕ್ರೀಟ್‌ ಕಾಮಗಾರಿಯಿಂದಾಗಿ ಸಂಚಾರ ಸ್ಥಗಿತಗೊಂಡಿದೆ, ಇದಕ್ಕೆ  ಪರ್ಯಾಯವಾಗಿ ಬಳಕೆಯಾಗುತ್ತಿದ್ದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತದಿಂದ ತೊಂದರೆಯಾಗಿದೆ. ಬೆಂಗಳೂರು- ಮಂಗಳೂರು ಸಂಪರ್ಕಕ್ಕೆ ಹೆಬ್ಟಾಗಿಲಿನಂತಿರುವ ಈ ಎರಡೂ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡ ಕಾರಣ ಜನರು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ ಪ್ರತಿವರ್ಷ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತದೆ. ಮರ ಬಿದ್ದು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುತ್ತದೆ. ಆಗ ಶಿರಾಡಿ ರಸ್ತೆ ಮೂಲಕ ಸಂಚಾರ ನಡೆಯುತ್ತದೆ. ಆದರೆ ಈ ಬಾರಿ ಶಿರಾಡಿ ರಸ್ತೆಯಲ್ಲಿ ಕಾಂಕ್ರೀಟ್‌ ಕಾಮಗಾರಿ
ಪ್ರಗತಿಯಲ್ಲಿರುವ ಕಾರಣ ಕಳೆದ ಜನವರಿಯಿಂದಲೇ ಬಂದಾಗಿದೆ. ಸುಳ್ಯ-ಮಡಿಕೇರಿ ಹೆದ್ದಾರಿ ಹೊರತು ಪಡಿಸಿದರೆ ಬೆಂಗಳೂರು- ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಅತಿಕಡಿಮೆ ದೂರದ ರಸ್ತೆ ಚಾರ್ಮಾಡಿ ಘಾಟಿ ಹೆದ್ದಾರಿ. ಈ ಕಾರಣಕ್ಕಾಗಿ ಹೆಚ್ಚಿನ ವಾಹನಗಳು ಈಗ ಅದೇ ಮಾರ್ಗದಲ್ಲಿ ಸಂಚರಿಸುತ್ತಿವೆ.
 

Advertisement

Udayavani is now on Telegram. Click here to join our channel and stay updated with the latest news.

Next